ಪುಟ:ರಂಗಣ್ಣನ ಕನಸಿನ ದಿನಗಳು.pdf/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಕರಣ ೧೬

ತಿಪ್ಪೇನಹಳ್ಳಿಯ ಮೇಷ್ಟ್ರು

ಕೆಲವು ದಿನಗಳ ತರುವಾಯ ಕಿತ್ತೂರಿನ ಸೈಮರಿ ಸ್ಕೂಲಿನ ವಿಚಾರದಲ್ಲಿ ಬದಲಾವಣೆಗಳಾದುವು. ಕಟ್ಟಡವನ್ನು ರಿಪೇರಿ ಮಾಡಿ ಕೊಟ್ಟಿಲ್ಲದ ಕಾರಣದಿಂದಲೂ, ಅಲ್ಲಿ ಪ್ಲೇಗಿನ ಇಲಿ ಬಿದ್ದು ಸರಿಯಾಗಿ ಡಿಸಿನ್ಫೆಕ್ಷನ್ ಮಾಡಲಾಗುವುದಿಲ್ಲವೆಂದು ವೈಸ್ ಪ್ರಸಿಡೆಂಟರು ಬರೆದಿರುವ ಕಾರಣದಿಂದಲೂ ಆ ಕಟ್ಟಡವನ್ನು ಖಾಲಿ ಮಾಡಲಾಗಿದೆ ಎಂದು ಕಲ್ಲೇಗೌಡರಿಗೆ ನೊಟೀಸನ್ನು ರಂಗಣ್ಣ ಕೊಟ್ಟು ಬಿಟ್ಟನು. ಮರದ ಸಾಮಾನುಗಳು, ಮೊದಲಾದುವನ್ನೆಲ್ಲ ಡಾಕ್ಟರ ಅಭಿಪ್ರಾಯವನ್ನನುಸರಿಸಿ ಚೊಕ್ಕಟ ಮಾಡಬೇಕೆಂದೂ ಅನಂತರ ಅವುಗಳನ್ನು ಮಿಡಲ್ ಸ್ಕೂಲಿನ ಕಟ್ಟಡಕ್ಕೆ ಸಾಗಿಸಿ ಪಾಠಶಾಲೆಯನ್ನು ಒಪ್ರೊತ್ತು ಮಾತ್ರ ಆ ಕಟ್ಟಡದಲ್ಲಿ ಏಳೂವರೆ ಯಿಂದ ಹನ್ನೊಂದರವರೆಗೆ ಮಾಡಬೇಕೆಂದೂ ಆ ಪಾಠಶಾಲೆಯ ಹೆಡ್ಮಾಸ್ಟರಿಗೆ ಕಾಗದ ಬರೆದನು. ಅದರಂತೆ ಆ ಕಟ್ಟಡ ಖಾಲಿಯಾಗಿ ಪ್ರೈಮರಿ ಸ್ಕೂಲು ಮಿಡಲ್ ಸ್ಕೂಲಿನ ಕಟ್ಟಡದಲ್ಲಿ ಕೆಲಸಮಾಡಲು ಪ್ರಾರಂಭವಾಯಿತು. ಆ ಊರಿನ ಜನರೆಲ್ಲ ಆಶ್ಚರ್ಯಪಡುತ್ತ, 'ಗಂಡು ಇನ್ ಸ್ಪೆಕ್ಟರು ! ಕಲ್ಲೇಗೌಡನಿಗೆ ತಕ್ಕ ಶಾಸ್ತಿ ಮಾಡಿ ಬಿಟ್ಟರು ! ಅವನ ಮಾತಿಗೆ ಹೋಗದೆ ಹಿ೦ದಿನವರೆಲ್ಲ ಹೆದರಿಕೊಂಡು ಸಾಯುತ್ತಿದ್ದ ರು. ಈಗ ಇವರು ಧೈರ್ಯ ಮಾಡಿ ಕಟ್ಟಡವನ್ನು ಖಾಲಿ ಮಾಡಿಯೇ ಬಿಟ್ಟರಲ್ಲ ! ಎಂದು ಬೀದಿ ಬೀದಿಗಳಲ್ಲಿ ನಿಂತು ಆಡಿಕೊಳ್ಳತ್ತಿದ್ದರು. ತನ್ನ ಕಟ್ಟಡ ಖಾಲಿಯಾಯಿತೆಂದೂ ಮುಂದೆ ಬಾಡಿಗೆ ಬರುವುದಿಲ್ಲವೆಂದೂ ಕಲ್ಲೇಗೌಡನಿಗೆ ತಿಳಿದಾಗ ಆತನಿಗೆ ಉಗ್ರ ಕೋಪ ಬಂದು, 'ಈ ಇನ್ಸ್ಪೆಕ್ಟರ ಹುಟ್ಟಡಗಿಸಿಬಿಡುತ್ತೇನೆ ! ನನ್ನನ್ನು ಯಾರು ಎಂದು ತಿಳಿದು ಕೊಂಡಿದ್ದಾನೆ ಇವನು ! ಡೆಪ್ಯುಟಿ ಕಮಿಷನರ್‌ ಮತ್ತು ರೆವಿನ್ಯೂ ಕಮಿಷನರುಗಳೇ ನನಗೆ ಹೆದರುತ್ತಿರುವಾಗ ಈ ಚಿಲ್ಲರೆ ಇಸ್ಕೊಲ್ ಇನ್ಸ್ಪೆಕ್ಟರು ನನ್ನ ಮೇಲೆ ಕೈ ಮಾಡೋಕ್ಕೆ ಬಂದಿದ್ದಾನೆ! ಆಗಲಿ ! ಎಂದು ಗರ್ಜಿಸಿದನಂತೆ,