ಪುಟ:ರಂಗಣ್ಣನ ಕನಸಿನ ದಿನಗಳು.pdf/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತಿಮ್ಮರಾಯಪ್ಪನ ಕಥೆ

'ಎಲ್ಲಾ ಇದೆಯಪ್ಪ, ಇಲಾಖೆಯಲ್ಲಿದ್ದಾಗ ನೂರೆಪ್ಪತ್ತೈದು ರೂಪಾಯಿಗಳ ಸಂಬಳ ಬರುತ್ತಿತ್ತು. ಮೇಲೆ ಭತ್ಯೆ ಬರುತ್ತಿತ್ತು. ಇಲ್ಲಿ ಇನ್ನೂರು ರೂಪಾಯಿ ಸಂಬಳ ಕೊಡುತ್ತಿದ್ದಾರೆ. ಮೇಲೆ ಎಪ್ಪತ್ತೈದು ರೂಪಾಯಿ ಅಲೋಯನ್ಸ್ ಕೊಡುತ್ತಾರೆ. ಆದರೂ........?

'ಇನ್ನೇನು ಆದರೂ ? ಹಿಂದಿನದಕ್ಕಿಂತ ನೂರು ರೂಪಾಯಿ ಹೆಚ್ಚಾಗಿ ಗಿಟ್ಟಿಸುತ್ತಾ ಇದ್ದೀಯೆ. ನಿನಗೆ ಅಸಮಾಧಾನಕ್ಕೇನೂ ಕಾರಣವೇ ಇಲ್ಲವಲ್ಲ. ನಿಮ್ಮ ಜನಕ್ಕೆ ಶಿಫಾರಸುಗಳಿರುತ್ತೆ, ಬಡ್ತಿಗಳು ದೊರೆಯುತ್ತೆ, ಅಲ್ಲಿ ಇಲ್ಲಿ ಅಲೋಯೆನ್ಸ್ ಬರುವ ಕಡೆ ಹುದ್ದೆಗಳು ದೊರೆಯುತ್ತವೆ. ನಮ್ಮನ್ನು ಕೇಳುವವರಾರು ? ತೀರ್ಥಹಳ್ಳಿ ಕೊಂಪೆಗೋ ಮೂಡಗೆರೆಗೋ ಮಿಡಲ್ ಸ್ಕೂಲ್ ಹೆಡ್ ಮಾಸ್ಟರ್ ಕೆಲಸಕ್ಕೆ ನಮ್ಮನ್ನು ಹಾಕುತ್ತಾರೆ ?'

'ಅದು ನಿನ್ನ ಅಭಿಪ್ರಾಯ. ಕೇಳು ರಂಗಣ್ಣ ! ಬೆಂಗಳೂರಿಗೆ ಬಂದ ಮೇಲೆ ಹದಿನೈದು ಪೌಂಡು ತೂಕದಲ್ಲಿ ಇಳಿದು ಹೋಗಿದ್ದೇನೆ ! ಮನೆಯಲ್ಲಿ ದಿನವೂ ಆಕೆ,- ಏಕೆ ಬಂದಿರೋ ಈ ಹಾಳು ಕೆಲಸಕ್ಕೆ ? ಆಗಲೇ ಮೂಳೆ ಬಿಟ್ಟು ಕೊಂಡಿದ್ದೀರಿ ; ನಮಗೆ ಈ ಕೆಲಸ ಬೇಡ ; ಹಿಂದಿನ ಕೆಲಸಕ್ಕೆನೇ ಹೊರಟು ಹೋಗೋಣ ಎಂದು ಹೇಳುತ್ತಿದ್ದಾಳೆ.'

'ವಿಚಿತ್ರದ ಮನುಷ್ಯರು ನೀವು ! ಈಗ ನಿನ್ನ ತೂಕ ಎಷ್ಟು ? ನಿನ್ನಾಕೆಯ ತೂಕ ಎಷ್ಟು ?'

'ನನ್ನ ತೂಕ ಈಗ ಇನ್ನೂರ ಐದು ಪೌಂಡು. ಆಕೆಯದು ನೂರತೊಂಬತ್ತು ಪೌಂಡು, ಹಿಂದಿನಗಿಂತ ನೂರು ರೂಪಾಯಿ ಹೆಚ್ಚಿಗೆ ಸಂಬಳ ಸಾರಿಗೆ ಬರುತ್ತಿದೆ ಎಂದು ನೀನೇನೋ ಹೇಳಿದೆ. ಆದರೆ ಕೇಳು ಮಹಾರಾಯ ! ನಾನು ಬೆಳಗ್ಗೆ ಎಂಟು ಗಂಟೆಗೆ ಮನೆ ಬಿಟ್ಟರೆ ರಾತ್ರಿ ಎಂಟು ಗಂಟೆಯಾದರೂ ಮನೆಗೆ ಬರುವುದು ಕಷ್ಟ, ಈ ದಿನವೇನೋ ಅಕಸ್ಮಾತ್ತಾಗಿ ಬೇಗ ಹೊರಟು ಬಂದೆ. ದಿನಾಗಲೂ ಬೆಳಗ್ಗೆ ಅಷ್ಟು ಹೊತ್ತಿಗೆಲ್ಲ ಊಟಮಾಡಿ ಅಭ್ಯಾಸವಿಲ್ಲ, ಟರ್ಫಿ ಕ್ಯಾರಿಯರಿನಲ್ಲಿ ಅನ್ನ ಹುಳಿ ಇತ್ಯಾದಿಯನ್ನು ಮಧ್ಯಾಹ್ನ ತರಿಸಿಕೊಳ್ಳಬೇಕು. ಕಚೇರಿಯಲ್ಲೂ ಒಂದು ಕ್ಷಣ ವಿರಾಮವಿಲ್ಲ, ಮೂಟೆಗಳನ್ನು ತೂಕ ಮಾಡಿ