ಪುಟ:ರಂಗಣ್ಣನ ಕನಸಿನ ದಿನಗಳು.pdf/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತಿಮ್ಮರಾಯಪ್ಪನ ಕಥೆ

ನಾನು ಮುಖ ತೋರಿಸುವುದು ಹೇಗೆ ? ಅವರು ನನ್ನನ್ನು ಮುಖಂಡ ಎಂದು ತಿಳಿದಾರೆಯೇ ? ಹಾಗೆಲ್ಲ ಮಾಡಬೇಡ ಎಂದು ಬಲಾತ್ಕಾರ ಮಾಡಿ ನನ್ನ ತಲೆಗೆ ಈ ಕೆಲಸವನ್ನು ಕಟ್ಟಿದ್ದಾನೆ.'

' ಈಗೇನು ? ಒಳ್ಳೆಯದೇ ಆಯಿತು. ನನಗೂ ಯಾವನಾದರೊಬ್ಬ ಮುಖಂಡ ಶಿಫಾರಸು ಮಾಡಿ, ಹಾಗೆ ಬಲಾತ್ಕಾರದಿಂದ ತಲೆಗೆ ಕಟ್ಟಿದರೆ ಸಂತೋಷದಿಂದ ತಲೆಗೆ ಕಟ್ಟಿಸಿಕೊಂಡೇನು.'

' ರಂಗಣ್ಣ ನಿನಗೇನು ಗೊತ್ತು. ಇಲ್ಲಿ ದಿನಕ್ಕೆ ಹನ್ನೆರಡು ಗಂಟೆಗಳ ಕಾಲ ದುಡಿದು ಮೈ ಕೈ ನೋಯಿಸಿಕೊಂಡು ಇನ್ನೂರು ರೂಪಾಯಿಗಳ ಸಂಬಳ ತೆಗೆದುಕೊಳ್ಳುವುದು ಜಾಣತನವೋ ಅಥವಾ ಅಲ್ಲಿ ದಿನಕ್ಕೆ ಎರಡು ಗಂಟೆಗಳ ಕಾಲ ಕಚೇರಿಗೆ ಹೋದ ಶಾಸ್ತ್ರ ಮಾಡಿ ಆಟ ಆಡಿಕೊಂಡಿದ್ದು ನೂರೆಪ್ಪತ್ತೈದು ರೂಪಾಯಿಗಳ ಸಂಬಳ ತೆಗೆದು ಕೊಳ್ಳುವುದು ಜಾಣತನವೋ ? ಅಲ್ಲಿ ಸುಖವಾಗಿದ್ದೆ. ಇನ್ ಸ್ಪೆಕ್ಟರು ಎಂದು ಗೌರವ ಇತ್ತು. ಮೇಷ್ಟ್ರುಗಳೋ ಶ್ಯಾನುಭೋಗರುಗಳೋ ಉಪ್ಪಿಟ್ಟು, ದೋಸೆ, ಕಾಫಿ, ಎಳನೀರು, ಬಾಳೇಹಣ್ಣು ಮುಂತಾದುವನ್ನು ತಂದು ಕೊಟ್ಟು, ಉಪಚಾರ ಮಾಡುತ್ತಿದ್ದರು. ಮೂರು ಹೊತ್ತ ಪುಷ್ಕಳವಾಗಿ ತಿಂಡಿ ತೀರ್ಥಗಳ ನೈವೇದ್ಯ ಮಾಡಿಸಿ ಕೊಂಡು ಹಾಯಾಗಿ ಕಾಲಕಳೆದುಕೊಂಡು ಇದ್ದವನನ್ನು ತಂದು ಈ ಸೆರೆಮನೆಯಲ್ಲಿ ಕೂಡಿ ಖೈದಿಯ ಕೈಯಲ್ಲಿ ಕೆಲಸ ತೆಗೆಯುವಂತೆ ತೆಗೆಯುತ್ತಿದ್ದರೆ ಸಹಿಸಿಕೊಂಡು ಬದುಕಿರಬಹುದೇ? ಇದು ಏನು ಬಾಳು ರಂಗಣ್ಣ ? ಸ್ವಾತಂತ್ರವಿಲ್ಲ ಸಂತೋಷವಿಲ್ಲ ; ಒಂದು ಒಳ್ಳೆಯ ನೋಟವಿಲ್ಲ ಊಟವಿಲ್ಲ.

' ತಿಮ್ಮರಾಯಪ್ಪ ! ನೀನು ಹೇಳುತ್ತಿರುವ ವರ್ಣನೆ ನನ್ನ ಬಾಯಲ್ಲಿ ನೀರೂರಿಸುತ್ತಿದೆಯಲ್ಲ ! ಹಾಗೆ ಆಟ ಆಡಿಕೊಂಡು ಸಂಬಳ ತೆಗೆದುಕೊಳ್ಳಬಹುದೇ ? ಕಚೇರಿಯಲ್ಲಿ ಕೆಲಸ ಹೆಚ್ಚಲ್ಲವೇ ? ಹೊರಗಡೆ ಹೋದರೆ ಸ್ಕೂಲುಗಳ ತನಿಖೆ, ಅವುಗಳ ವರದಿ ಬರೆಯುವುದು, ಗ್ರಾಮಸ್ಥರಿಗೆ ಸಮಾಧಾನ ಹೇಳುವುದು, ವಿದ್ಯಾಭಿವೃದ್ಧಿಯನ್ನು ದೇಶದಲ್ಲುಂಟುಮಾಡುವುದು-ಇವೆಲ್ಲ ಜವಾಬ್ದಾರಿಯ ಕಷ್ಟ ಕರವಾದ ಕೆಲಸಗಳಲ್ಲವೆ ? ?'