ಪುಟ:ರಂಗಣ್ಣನ ಕನಸಿನ ದಿನಗಳು.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತಿಮ್ಮರಾಯಪ್ಪನ ಕಥೆ

'ಅಯ್ಯೋ ಶಿವನೇ ! ಕೃತಜ್ಞನಾಗೇನೋ ಇದ್ದೇನೆ. ಆದರೆ ನೋಡು, ನಾವು ವ್ಯಾಪಾರದವರು, ನೀನು ಕಂಡಿದ್ದೀಯಲ್ಲ. ನಾನು ಕೋಲಾರದಲ್ಲಿದ್ದಾಗ ಮನೆಯ ಬಾಡಿಗೆ ಹತ್ತೋ ಹನ್ನೆರಡೋ ರೂಪಾಯಿ ಕೊಡುತ್ತಿದ್ದೆ. ಒಬ್ಬ ಮೇಷ್ಟನ್ನೇ ಅಡಿಗೆಗೆ ಇಟ್ಟು ಕೊಂಡಿದ್ದೆ. ಅವನಿಗೆ ನಾನೇನೂ ಸಂಬಳ ಕೊಡುತ್ತಿರಲಿಲ್ಲ. ಈಗಲೂ ನನ್ನಾಕೆ ನನಗೆ ಹೇಳುತ್ತಾಳೆ : ಹಾಳು ಬೆಂಗಳೂರಿಗೆ ಬಂದು ಎಲ್ಲವನ್ನೂ ದುಡ್ಡು ಕೊಟ್ಟು ಕೊಂಡುಕೊಳ್ಳುವ ಸ್ಥಿತಿ ಬಂದಿದೆಯಲ್ಲ ; ಹುಣಿಸೆ ಹಣ್ಣಿಗೆ ದುಡ್ಡು ಹಾಕಬೇಕಾಗಿದೆಯಲ್ಲ; ಅವರೆಕಾಯಿಗೆ ದುಡ್ಡು ಕೊಟ್ಟು ತಿನ್ನಬೇಕಾಗಿದೆಯಲ್ಲ ; ಬರಿಯ ತರಕಾರಿಗೇನೆ ತಿಂಗಳಿಗೆ ಹದಿನೈದು ರೂಪಾಯಿಗಳಾಗುತ್ತೆ. ಈ ಸಂಸಾರ ಹೇಗೆ ಪೂರೈಸುತ್ತೆ ? ನನ್ನ ಕೈಯಲ್ಲಾಗದು ಎನ್ನುತ್ತಾಳೆ. ಜೊತೆಗೆ ಇಲ್ಲಿ ಮನೆಯ ಬಾಡಿಗೆ ನಲವತ್ತು ರೂಪಾಯಿ. ನನ್ನ ಹೆಂಡತಿ ಅಡಿಗೆ ಮಾಡಲಾರಳು ; ಅಡಿಗೆಯವನಿಗೆ ತಿಂಗಳಿಗೆ ಇಪ್ಪತೈದು ರೂಪಾಯಿ. ನನ್ನ ಮಕ್ಕಳ ಮನೆಮೇಷ್ಟರಿಗೆ ಕೋಲಾರದಲ್ಲಿ ಏನನ್ನೂ ಕೊಡುತ್ತಿರಲಿಲ್ಲ; ಇಲ್ಲಿ ತಿಂಗಳಿಗೆ ಹದಿನೈದು ರೂಪಾಯಿ. ಏನಾಯಿತು ಈ ಲೆಕ್ಕಾಚಾರವೆಲ್ಲ? ಹೇಳು ರಂಗಣ್ಣ. ಕಷ್ಟವೂ ಹೆಚ್ಚಿತು, ಆದಾಯವೂ ಇಳಿಯಿತು. ಎರಡು ದಿನ ನೀನೂ ಇನ್ ಸ್ಪೆಕ್ಟರ್ ಗಿರಿ ಮಾಡಿದರೆ ಆ ಸುಖ ಆ ಭೋಗ ಗೊತ್ತಾಗುತ್ತದೆ ; ಈಗಿನ ನನ್ನ ಅವಸ್ಥೆ ಅರಿವಾಗುತ್ತದೆ.

ಈ ಮಾತುಗಳು ಮುಗಿಯುವ ಹೊತ್ತಿಗೆ ತಿಂಡಿ ತಿನ್ನುವುದು ಮುಗಿಯಿತು. ಮಾಣಿ ಬಿಲ್ಲನ್ನು ತಂದು ಕೊಟ್ಟನು. ತಿಮ್ಮರಾಯಪ್ಪನೇ ಹಣವನ್ನು ಕೊಟ್ಟನು. ಹೋಟಲನ್ನು ಬಿಟ್ಟು ಬರುತ್ತೆ ಪರಸ್ಪರವಾಗಿ ಸಂಸಾರದ ಮಾತುಗಳನ್ನು ಆಡುತ್ತ ಮಕ್ಕಳೆಷ್ಟು ? ಹೆಣ್ಣು ಮಕ್ಕಳಿಗೆ ಮದುವೆ ಆಗಿದೆಯೆ? ಹುಡುಗರು ಯಾವ ತರಗತಿಗಳಲ್ಲಿ ಓದುತ್ತಿದ್ದಾರೆ. ಇತ್ಯಾದಿ ಪ್ರಶೋತ್ತರಗಳಿಂದ ದಾರಿಯನ್ನು ಸಾಗಿಸುತ್ತ ವಿಶ್ವೇಶ್ವರಪುರದ ಸಜ್ಜನರಾಯರ ಸರ್ಕಲ್ ಬಳಿಗೆ ಬಂದರು. ರಂಗಣ್ಣನು ಅಲ್ಲಿ ನಿಂತು ಇನ್ನು ನಾನು ಮನೆಗೆ ಹೋಗುತ್ತೇನೆ. ನಾಳೆ ನಾಳಿದ್ದರಲ್ಲಿ ಭೇಟಿಯಾಗುತ್ತೇನೆ' ಎಂದು ಹೇಳಿದನು. ತಿಮ್ಮರಾಯಪ್ಪ ಗವೀಪುರದ