ಪುಟ:ರಂಗಣ್ಣನ ಕನಸಿನ ದಿನಗಳು.pdf/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕನಸು ದಿಟವಾಯಿತು

೧೧

ಊಟಮಾಡಿ ಕೊಂಡಾದರೂ ಬರೋಣವೆಂದು ರಂಗಣ್ಣ ಮನೆಗೆ ಹಿಂದಿರುದನು.

ಊಟವಾದ ಮೇಲೆ ಹೊಟ್ಟೆ ಭಾರವಾಯಿತು. ಪುನಃ ಗವೀಪುರದ ಬಡಾವಣೆ ಕಡೆಗೆ ಹೊರಡಲು ಮೊದಲು ಮನಸ್ಸಾಗಲಿಲ್ಲ. ಆದರೆ ಮಾರನೆಯ ದಿನ ಬೆಳಗ್ಗೆ ಹೋಗೋಣವೆಂದರೆ ಬೆಳಗ್ಗೆ ಎಂಟು ಗಂಟೆಗೆಲ್ಲ ತಿಮ್ಮರಾಯಪ್ಪ ಮನೆ ಬಿಟ್ಟು ಹೊರಟು ಹೋಗುತ್ತಾನೆ ಎ೦ಬುದು ತಿಳಿದಿತ್ತು. ಆದ್ದರಿಂದ ಸ್ವಲ್ಪ ಹೊತ್ತು ಸುಧಾರಿಸಿಕೊಂಡು ತಿಮ್ಮರಾಯಪ್ಪನಿಗೆ ವರ್ತಮಾನ ಕೊಡಬೇಕು, ಇನ್ಸ್ಪೆಕ್ಟರಾಗಿ ಹೋಗುವವನು ಕಷ್ಟ ಪಡಲು ಹಿಂಜರಿದರೆ ಹೇಗೆ ? ಎಂದು ಮುಂತಾಗಿ ಚರ್ಚೆ ಮಾಡಿ ಕೊಂಡು – ರಂಗಣ್ಣ ಮನೆಯನ್ನು ಬಿಟ್ಟು ಹೊರಟನು. ತಿಮ್ಮರಾಯಪ್ಪನ ಮನೆಗೆ ಬಂದಾಗ ರಾತ್ರಿ ಒಂಬತ್ತು ಗಂಟೆಯಾಯಿತು ; ಮನೆಯ ದೀಪಗಳು ಕ್ಷಣ ಆರಿ ಪುನ: ಹೊತ್ತಿಕೊಂಡವು. ವಿಚಾರಿಸಿದರೆ, ಇನ್ನೂ ಬಂದಿಲ್ಲ ಎಂದು ತಿಳಿಯಿತು. ಹಿಂದಿನ ದಿನ ತಿಮ್ಮರಾಯಪ್ಪ ಹೇಳಿದ್ದ ಕಥೆಯೆಲ್ಲ ರಂಗಣ್ಣನ ನೆನಪಿಗೆ ಬಂತು. ಅಯ್ಯೋ ಪಾಪ ! ಅವನು ಹೇಳಿದ್ದೆಲ್ಲ ನಿಜ' ಎಂದು ಕೊಂಡು ಹಿಂದಕ್ಕೆ ಹೊರಡಲು ಸಿದ್ಧನಾಗುತ್ತಿದ್ದಾಗ, ತಿಮ್ಮರಾಯಪ್ಪ, ಉಸ್ಸಪ್ಪ ' ಎಂದು ಹೇಳಿಕೊಳ್ಳುತ್ತಾ ಬೈಸಿಕಲ್ಲಿನಿಂದ ಇಳಿದನು ಬೈಸಿಕಲ್ಲು ಸಹ 'ಉಸ್ಸಪ್ಪಾ! ಬದುಕಿಕೊಂಡೆ !'- ಎಂದು ಲಘುವಾಯಿತು. ರಾತ್ರಿ ಅಷ್ಟು ಹೊತ್ತಿನಲ್ಲಿ ರಂಗಣ್ಣ ಬಂದಿರುವುದನ್ನು ನೋಡಿ ತಿಮ್ಮರಾಯಪ್ಪನಿಗೆ ಆಶ್ಚರ್ಯವಾಯಿತು. ಆ ದಿನದ ವಿಶೇಷ ವರ್ತಮಾನವನ್ನು ತಿಳಿಸುವುದು ರಂಗಣ್ಣನಿಗೆ ಹೆಚ್ಚು ಕಾಲ ಹಿಡಿಯಲಿಲ್ಲ. ' ಭಲೆ ! ಭೇಷ್! ರಂಗಣ್ಣ ಶಿವನಾಣೆ ! ನನಗೆ ಬಹಳ ಸಂತೋಷ ಬಾ, ಒಳಕ್ಕೆ ಹೋಗೋಣ ? ಎಂದು ತಿಮ್ಮರಾಯಪ್ಪ ಹೇಳುತ್ತ ರಂಗಣ್ಣನ ಭುಜವನ್ನು ತಟ್ಟಿ ಒಳಕ್ಕೆ ಕರೆದುಕೊಂಡು ಹೋದನು.

ಕೊಟಡಿ ಅಚ್ಚು ಕಟ್ಟಾಗಿದ್ದಿತು. ಕುರ್ಚಿಗಳು, ಮೇಜು, ಸೋಫಾ ಮತ್ತು ನೆಲಕ್ಕೆ ಜಂಖಾನ ಇದ್ದುವು. ತಿಮ್ಮರಾಯಪ್ಪ ಸ್ವಲ್ಪ ರಸಿಕನೂ ಭೋಗಿಯೂ ಆಗಿದ್ದನೆಂದು ಆ ಅಚ್ಚು ಕಟ್ಟಿನಿಂದ ಹೇಳಬಹುದಾಗಿತ್ತು. ರಂಗಣ್ಣನನ್ನು ಸೋಫಾದಲ್ಲಿ ಕುಳ್ಳಿರಿಸಿ ತನ್ನ ಬಟ್ಟೆಗಳನ್ನು ಬದಲಾಯಿಸಿ