ಪುಟ:ರಂಗಣ್ಣನ ಕನಸಿನ ದಿನಗಳು.pdf/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕನಸು ದಿಟವಾಯಿತು

೧೩

ಬೇಡ, ಮೇಷ್ಟರುಗಳು ಬಡವರು. ಅವರ ಹೊಟ್ಟೆಯ ಮೇಲೆ ಹೊಡೆಯಬೇಡ, ಒಂದು ವೇಳೆ ಜುಲ್ಮಾನೆ ಹಾಕಬೇಕಾದರೆ, ಎರಡು ತಿಂಗಳ ಅನಂತರ ವಜಾ ಮಾಡಿ ಬಿಡು, ಯಾವುದನ್ನೂ ಮನಸ್ಸಿಗೆ ಬಹಳವಾಗಿ ಹಚ್ಚಿಸಿಕೊ೦ಡು ಹೋಗಬೇಡ, ನನ್ನಿಂದಲೇ ದೇಶೋದ್ಧಾರವಾಗುತ್ತದೆ, ನಾನೇ ಉದ್ಧಾರ ಮಾಡಿ ಬಿಡುತ್ತೇನೆ ಎಂಬ ಭಾವನೆ ಇಟ್ಟು ಕೊಳ್ಳಬೇಡ. ಆರೋಗ್ಯ ಕೆಡುವಂತೆ ಹೆಚ್ಚಾಗಿ ಸರ್ಕೀಟು ತಿರುಗಬೇಡ ; ಹೆಚ್ಚಾಗಿ ಬೈಸ್ಕಲ್ ತುಳಿಯಬೇಡ, ಗ್ರಾಮಸ್ಥರನ್ನು ವಿರೋಧ ಮಾಡಿಕೊಳ್ಬೇಡ, ಸರ್ಕೀಟು ಹೋದಾಗ ಮೇಷ್ಟರೋ ಗ್ರಾಮಸ್ಥರೋ ಏನಾದರೂ ಹಾಲೂ ಮೊಸರೂ ಹಣ ತಂದುಕೊಡುತ್ತಾರೆ. ಬಿಗುಮಾನ ಮಾಡಿಕೊಂಡು ತಿರಸ್ಕರಿಸ ಬೇಡ, ಇವುಗಳಲ್ಲೆಲ್ಲ ದೋಷವಿಲ್ಲ. ಪುಡಿ ಕಾಸುಗಳಿಗೆ ನೀನು ಆಶೆ ಪಡುವುದಿಲ್ಲವೆಂಬುದು ನನಗೆ ಗೊತ್ತು. ನೀನು ನೀತಿ ಕೆಡುವುದಿಲ್ಲ ಎನ್ನುವುದೂ ನನಗೆ ಗೊತ್ತು, ನಗುನಗುತಾ ಕೆಲಸ ಮಾಡು ; ನಗು ನಗುತಾ ಅವರೂ ಕೆಲಸಮಾಡುವಂತೆ ನೋಡಿಕೊ. ಜನಾರ್ದನಪುರ ಸ್ವಲ್ಪ ಪು೦ಡು ರೇಂಜು ಸಾಲದ್ದಕ್ಕೆ ಅಲ್ಲಿ ಕೆಲವರು ಮುಖಂಡರ ಕಾಟ ಹೆಚ್ಚು. ಇಷ್ಟೇ ರಂಗಣ್ಣ ! ಸ್ವಲ್ಪ ಎಚ್ಚರಿಕೆಯಿರಲಿ; ಗುಮಾಸ್ತೆಯ ಮೇಲೆ ಕಣ್ಣಿರಲಿ, ಸರ್ವಜ್ಞನ ವಚನ ನೆನಪಿದೆಯೋ ಇಲ್ಲವೊ ? - ನಂಬಿದಂತಿರಬೇಕು, ನಂಬದಲೆ ಇರಬೇಕು, ನಂಬಿದವ ಕೆಟ್ಟ ಸರ್ವಜ್ಞ.'

' ಒಳ್ಳೆಯದು ತಿಮ್ಮರಾಯಪ್ಪ! ಜ್ಞಾಪಕದಲ್ಲಿಟ್ಟುಕೊಂಡಿರುತ್ತೇನೆ. ಇದಕ್ಕಾಗಿಯೇ ನಿನ್ನ ಹತ್ತಿರಕ್ಕೆ ನಾನು ಬಂದದ್ದು.'

' ಬೆಂಗಳೂರು ಬಿಟ್ಟು ಹೊರಡುವ ಮೊದಲು ಇನ್ನೊಂದಾವೃತ್ತಿ ಬಾ , ತಾಂಬೂಲ ತೆಗೆದುಕೊಂಡು ಹೋಗು.'

' ಹಾಗೇ ಆಗಲಿ. ನಿನಗೆ ಹೇಳದೆ ನಾನು ಹೊರಡುತ್ತೇನೆಯೆ ? ಎಂದು ಉತ್ತರ ಹೇಳಿ ಬೈಸ್ಕಲ್ಲನ್ನು ಹತ್ತಿಕೊಂಡು ರಂಗಣ್ಣ ತನ್ನ ಮನೆಗೆ ಹಿಂದಿರುಗಿ ಬಂದನು.

ಮುಂದಿನ ಕೆಲವು ದಿನಗಳೆಲ್ಲ ಇನ್‌ಸ್ಪೆಕ್ಟರಗಿರಿಗೆ ತಕ್ಕಂತೆ ಸಜ್ಜುಮಾಡಿಕೊಳ್ಳುವುದರಲ್ಲಿ ಕಳೆದುವು. ಹೊಸದಾಗಿ ಕೆಲವು ಸರ್ಜ್ ಸೂಟುಗಳು, ಸರ್ಕೀಟಿಗೆ ಬೇಕಾದ ಮೆತ್ತೆ, ಹೋಲ್ಡ್ ಆಲ್ ಚೀಲ, ದಿಂಬು