ಪುಟ:ರಂಗಣ್ಣನ ಕನಸಿನ ದಿನಗಳು.pdf/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಕರಣ ೭

ದೊಡ್ಡ ಬೋರೇಗೌಡರು

ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸಗಳ ಸಮಸ್ಯೆ ಬಹಳ ದೊಡ್ಡದೆಂದು ರಂಗಣ್ಣನಿಗೆ ತಿಳಿದುಬಂತು. ಮೇಲಿನವರು ಬರಿಯ ವರದಿಗಳನ್ನು ತಯಾರು ಮಾಡುವುದರಲ್ಲಿಯೂ ಹೊರಗಿನ ಪ್ರಾಂತದವರಿಗೆ - ಅದರಲ್ಲಿಯೂ ಮುಖ್ಯವಾಗಿ ಇಂಗ್ಲಿಷು ಜನರಿಗೆ - ಇದೊಂದು ಮಾದರಿ ಸಂಸ್ಥಾನ ಎಂಬ ಅಭಿಪ್ರಾಯ ಹುಟ್ಟುವ ರೀತಿಯಲ್ಲಿ ಅಭಿವೃದ್ಧಿ ಪ್ರಕಾಶನ ಮಾಡುವುದರಲ್ಲಿಯೂ, ಕೇವಲ ಸಂಖ್ಯಾಬಾಹುಳ್ಯದಿಂದ ವಿದ್ಯಾ ಪ್ರಚಾರವನ್ನು ಅಳೆಯುವುದರಲ್ಲಿಯೂ ನಿರತರಾಗಿರುವರೆಂದು ಅವನಿಗೆ ಬೋಧೆಯಾಯಿತು. ಪ್ರಾಥಮಿಕ ದರ್ಜೆಯಲ್ಲಿ ಎರಡು ಲಕ್ಷಕ್ಕಿಂತ ಹೆಚ್ಚು ಮಕ್ಕಳು ಓದುತ್ತಿರಬಹುದು. ಆದರೆ ಪ್ರಯೋಜನವೇನು ? ಅದರಲ್ಲಿ ಒಂದೂವರೆ ಲಕ್ಷಕ್ಕಿಂತ ಹೆಚ್ಚಾಗಿ ಮೊದಲನೆಯ ತರಗತಿಯಲ್ಲೇ ಕೊಳೆಯುತ್ತಿರುವರು ; ನಾಲ್ಕನೆಯ ತರಗತಿಗೆ ಬರುವ ಮಕ್ಕಳ ಸಂಖ್ಯೆ ಬಹಳ ಕಡಮೆ. ಮಧ್ಯೆ ಬಿಟ್ಟು ಹೋಗುವವರ ಸಂಖ್ಯೆ ಹೆಚ್ಚು. ಸಂಖ್ಯೆಗಳನ್ನು ಕಟ್ಟಿ ಕೊಂಡು ಏನು ಮಾಡಬೇಕು ? ಇನ್ಸ್ಪೆಕ್ಟರುಗಳೂ, ಮೇಲ್ಪಟ್ಟ ಅಧಿಕಾರಿಗಳೂ ಜುಲ್ಮಾನೆ, ಸಸ್ಪೆಂಡು ಮೊದಲಾದ ಉಗ್ರ ಕಾರ್ಯಕ್ರಮಗಳಿಂದ ಭಯೋತ್ಪಾದನೆ ಮಾಡುವವರೇ ಹೊರತು, ಸಹಾನು ಭೂತಿಯಿಂದ ತಿದ್ದಿ ತಿಳಿವಳಿಕೆ ಕೊಟ್ಟ ವರಲ್ಲ. ಆ ಅಧಿಕಾರಿಗಳನ್ನು ಕಂಡರೆ ಕೆಳಗಿನವರಿಗೆ ವಿಶ್ವಾಸವಾಗಲಿ ಗೌರವವಾಗಲಿ ಸುತರಾಂ ಇರ ಲಿಲ್ಲ. ಊರಿಗೆ ಪ್ಲೇಗುಮಾರಿ ಬರುವುದೂ ಸ್ಕೂಲುಗಳ ತನಿಖೆಗೆ ಅಥವಾ ಭೇಟಿಗೆ ಆಧಿಕಾರಿಗಳು ಬರುವುದೂ ಎರಡೂ ಒಂದೇ ಎಂಬ ಭಾವನೆ ಉಪಾಧ್ಯಾಯರಲ್ಲಿ ನೆಲಸಿತ್ತು. ಉಪಾಧ್ಯಾಯರಲ್ಲಿ ಕೆಲವರೇನೋ ಪುಂಡರು ಇದ್ದರು. ಆದರೆ ಅವರ ಸಂಖ್ಯೆ ತೀರ ಕಡಮೆ; ಸೇಕಡ ಹತ್ತು ಇದ್ದಿರಬಹುದು, ಅವರಿಗೆ ಬೆಂಬಲಕಾರರು ರಾಜಕೀಯದಲ್ಲಿಯ ಕೆಲ