ಪುಟ:ರಂಗಣ್ಣನ ಕನಸಿನ ದಿನಗಳು.pdf/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಕರಣ ೮

ಮೇಷ್ಟ್ರು ಮುನಿಸಾಮಿ

ಮಾರನೆಯ ದಿನ ಬೆಳಗ್ಗೆ ರಂಗಣ್ಣನು, ' ಶಂಕರಪ್ಪ ! ನೀವೂ ಗೋಪಾಲ ಇಬ್ಬರೂ ನೆಟ್ಟಗೆ ಜನಾರ್ದನಪುರಕ್ಕೆ ಹಿಂದಿರುಗಿ ಹೋಗಿ. ನನ್ನ ಸಾಮಾನುಗಳನ್ನೆಲ್ಲ ಜೋಕೆಯಿಂದ ತೆಗೆದುಕೊಂಡು ಹೋಗಿ. ನಾನು ದಾರಿಯಲ್ಲಿ ಕೆಲವು ಸ್ಕೂಲುಗಳನ್ನು ಭೇಟಿ ಮಾಡಿಕೊಂಡು ಮಧ್ಯಾಹ್ನದ ಹೊತ್ತಿಗೆ ಊರನ್ನು ಬಂದು ಸೇರುತ್ತೇನೆ ' ಎಂದು ಹೇಳಿ ಬೈಸ್ಕಲ್ ಹತ್ತಿಕೊಂಡು ಹೊರಟನು. ದಾರಿಯಲ್ಲಿ ಎರಡು ಪಾಠಶಾಲೆಗಳನ್ನು ನೋಡಿದಮೇಲೆ ಸ್ವಲ್ಪ ಅಡ್ಡದಾರಿ ತಿರುಗಿ ತೀರ ಒಳನಾಡಿನ ಬೈರಮಂಗಲದ ಪಾಠಶಾಲೆಯನ್ನು ನೋಡೋಣವೆಂಬ ಒಂದು ಹುಚ್ಚು ಆಲೋಚನೆ ಹುಟ್ಟಿಕೊಂಡಿತು. ಬೈಸ್ಕಲ್ ತಿರುಗಿಸಿ ಕಾಲ ರಸ್ತೆಯಲ್ಲಿ ಹೊರಟನು. ಆದರೆ ದಾರಿ ಬಹಳ ಒರಟಾಗಿದ್ದಿತು. ಹಳ್ಳಕೊಳ್ಳಗಳ ಜೊತೆಗೆ ಕಲ್ಲುಗಳು ಹೆಚ್ಚಾಗಿದ್ದುವು. ಆದ್ದರಿಂದ ಅಲ್ಲಲ್ಲಿ ಬೈಸ್ಕಲ್ಲಿಂದ ಇಳಿದಿಳಿದು ಅದನ್ನು ತಳ್ಳಿಕೊಂಡು ಹೋಗಬೇಕಾಗಿತ್ತು. ನೆಟ್ಟಗೆ ಜನಾರ್ದನಪುರಕ್ಕೆ ಹಿಂದಿರುಗದೆ ಇದೇನು ಕಷ್ಟವನ್ನು ತಲೆಗೆ ಕಟ್ಟಿಕೊಂಡೆ? ಎಂದು ಪೇಚಾಡುತ್ತ, ಮುಖದಿಂದ ಇಳಿಯುತ್ತಿದ್ದ ಬೆವರನ್ನು ಒರಸಿಕೊಳ್ಳುತ್ತ ಹೋಗುತ್ತಿದ್ದನು. ರಸ್ತೆ ಸ್ವಲ್ಪ ಏರಾಗಿತ್ತು. ಆಗ ಎದುರು ಕಡೆಯಿಂದ ಒಬ್ಬ ಹಳ್ಳಿಯ ಮುದುಕನು - ಅರುವತ್ತು ವರ್ಷ ವಯಸ್ಸು ಮೀರಿದವನು - ನಿಧಾನವಾಗಿ ನಡೆದು ಬರುತ್ತಿದ್ದನು. ಆ ಗೌಡ ಹತ್ತಿರಕ್ಕೆ ಬರುತ್ತಲೂ, ‘ ಯಾವೂರ್ ಸೋಮಿ ?’ ಎಂದು ಕೇಳಿದನು.

‘ನಮ್ಮೂರು ಜನಾರ್ದನಪುರ.’

‘ಮತ್ತೆ ಈ ಕಾಡ ದಾರೀಲಿ ಬರ್ತಿವ್ರಿ.’

‘ಇಲ್ಲಿ ಸ್ಕೂಲ್ ನೋಡೋಣ ಎಂದು ಹೊರಟಿದ್ದೇನೆ.’