ಪುಟ:ರಂಗಣ್ಣನ ಕನಸಿನ ದಿನಗಳು.pdf/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಕರಣ ೯

ಆವಲಹಳ್ಳಿಯಲ್ಲಿ ಸಭೆ

ಹಿಂದೆಯೇ ನಿಶ್ಚೈಸಿದ್ದಂತೆ ಆವಲಹಳ್ಳಿಯಲ್ಲಿ ಉಪಾಧ್ಯಾಯರ ಸಂಘದ ಸಭೆಯನ್ನು ಸೇರಿಸಲು ಏರ್ಪಾಟು ನಡೆದಿತ್ತು. ರಂಗಣ್ಣನು ಹಿಂದಿನ ದಿನ ಸಾಯಂಕಾಲವೇ ಆವಲಹಳ್ಳಿಗೆ ಬಂದು ಮೊಕ್ಕಾಂ ಮಾಡಿದನು. ಸಭೆಯಲ್ಲಿ ಕಾರ್ಯಕ್ರಮಗಳೆಲ್ಲ ಚೆನ್ನಾಗಿ ನೆರವೇರಬೇಕೆಂದು ಮಾಧ್ಯಮಿಕ ಪಾಠಶಾಲೆಯ ಮುಖ್ಯೋಪಾಧ್ಯಾಯರ ಮತ್ತು ಸಹಾಯೋಪಾಧ್ಯಾಯರ ನೆರವನ್ನು ಪಡೆದುಕೊಂಡಿದ್ದನು. ಜೊತೆಗೆ ಕೆಲವು ದೊಡ್ಡ ಪ್ರಾಥಮಿಕ ಪಾಠಶಾಲೆಗಳ ಅನುಭವಿಗಳೂ ದಕ್ಷರೂ ಆದ ಮುಖ್ಯೋಪಾಧ್ಯಾಯರನ್ನೂ ಸಹಾಯೋಪಾಧ್ಯಾಯರನ್ನೂ ಮುಂದಾ ಗಿಯೇ ಕಂಡು ಅವರಿಗೆ ತಕ್ಕ ಸಲಹೆಗಳನ್ನು ಕೊಟ್ಟಿದ್ದನು.

ಆವಲಹಳ್ಳಿಯಲ್ಲಂತೂ ಏರ್ಪಾಟುಗಳು ಸಂಭ್ರಮದಿಂದ ನಡೆದಿದ್ದುವು. ಪಾಠ ಶಾಲೆಯ ಮುಂದುಗಡೆ ವಿಶಾಲವಾದ ಸೊಗಸಾದ ಹಸುರುವಾಣಿ ಚಪ್ಪರ, ಅದಕ್ಕೆ ಮಾವಿನೆಲೆಯ ತೋರಣಗಳು, ಬಾಳೆಯ ಕಂಬಗಳು, ಬಣ್ಣಬಣ್ಣದ ಕಾಗದದ ಮಾಲೆಗಳು- ಇವುಗಳ ಅಲಂಕಾರ. ಊರೆಲ್ಲ ಚೊಕ್ಕಟವಾಗಿದ್ದಿತು. ಏನೋ ದೊಡ್ಡದೊಂದು ಉತ್ಸವ ನೆರವೇರುತ್ತದೆಂದು ಹಳ್ಳಿಯವರೆಲ್ಲ ಬಹಳ ಸಂಭ್ರಮದಿಂದ ಚಪ್ಪರದ ಹತ್ತಿರ ಓಡಾಡುತ್ತಿದ್ದರು.

ಸಭೆ ಸೇರುವ ಶನಿವಾರದ ಬೆಳಗ್ಗೆ ಎಂಟು ಗಂಟೆಗೆಲ್ಲ ಹಳ್ಳಿಗಳಿಂದ ಉಪಾಧ್ಯಯರುಗಳು ಬಂದು ಸೇರಿದರು. ಚಪ್ಪರದಲ್ಲಿ ಸಭೆ ನಡೆಯಲು ಏರ್ಪಾಟಾಗಿದ್ದಿತು. ಹಳ್ಳಿಯ ಮುಖಂಡರು ಕುಳಿತುಕೊಳ್ಳುವುದಕ್ಕೆ ಸ್ಥಳವನ್ನು ಏರ್ಪಡಿಸಲಾಗಿತ್ತು. ದೊಡ್ಡ ಬೋರೇಗೌಡರಿಗೆ ರಂಗಣ್ಣ ತನ್ನ ಪಕ್ಕದಲ್ಲಿಯೇ ಕುರ್ಚಿಯನ್ನು ಹಾಕಿಸಿ ಅವರನ್ನು ಕೂಡಿಸಿಕೊಂಡಿ ದ್ದನು. ಸಭೆ ಎಂಟೂವರೆ ಗಂಟೆಗೆ ಸರಿಯಾಗಿ ಪ್ರಾರಂಭವಾಯಿತು.