ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ೦ಪರಾಮಾಯಣದ ಕಥೆ

39

ವಾಲಿಮುನಿಯು ತನ್ನ ಅಂಗುಷ್ಠದಿಂದ ಅದನ್ನೊತ್ತಿದನು. ರಾವಣನು ಬೆಟ್ಟದ ಕೆಳಗೆ ಸಿಕ್ಕಿ ಅಳುವುದಕ್ಕೆ ಮೊದಲು ಮಾಡಲು ಮಂಡೋದರಿಯು ಪರಿಜನ ರೊಡನೆ ಅಲ್ಲಿಗೆ ಬಂದು ರಕ್ಷಿಸೆಂದು ಮುನಿಯನ್ನು ಬೇಡಿ ಕೊಂಡಳು. ದಶಮುಖನು ಅಳುವ ಈ ದನಿಯೇ ರಾವಣನೆಂಬ ಹೆಸರಿಗೆ ಕಾರಣವಾಯಿತು. ಮಂಡೋ ದರಿಯ ಅಭೀಷ್ಟವನ್ನು ಸಲ್ಲಿಸಿ ವಾಲಿಯು ತನ್ನ ಅಂಗುಷ್ಟವನ್ನು ಮೇಲಕ್ಕೆತ್ತಲು ರಾವಣನು ರಸಾತಲದಿಂದ ಹೊರಟು ಬಂದು ವಾಲಿಭಟ್ಟಾರಕರನ್ನು ಪೂಜಿಸಿ ನಮಸ್ಕರಿಸಿ ತನ್ನ ತಪ್ಪನ್ನು ಮನ್ನಿಸಬೇಕೆಂದು ಬೇಡಿಕೊಂಡು ಅಲ್ಲಿಯ ಜಿನಾ ಲಯವನ್ನು ಹೊಕ್ಕು ನಿರ್ಭರ ಭಕ್ತಿಯಿಂದ ದೇವನನ್ನು ಅರ್ಚಿಸುತ್ತಿರುವಲ್ಲಿ ಆದಿ ಶೇಷನಿಗೆ ಆಸನ ಕಂಪವಾಗಲು ಅವನು ಕೈಲಾಸ ನಗಕ್ಕೆ ಬಂದು ರಾವಣನ ದೈವಭಕ್ತಿಗೆ ಮೆಚ್ಚಿ ಸಮಸ್ತ ದೇವಾಸುರ ಮುಖ್ಯನಾಯಕರಿಗೆ ಜೀವ ವಿಮುಕ್ತಿ ಯವ ಶಕ್ತಿಯನ್ನಿತ್ತು ಹೊರಟುಹೋದನು. ವಾಲಿಮುನಿಯು ಶುಕ್ಲಧ್ಯಾನಾಯತ್ತನಾಗಿ ಮುಕ್ತಿಯನ್ನು ಪಡೆದನು.
ಇತ್ತ, ರಾವಣನು ನಂದ್ಯಕಾ ಸುವೆಲಾದಿ ದ್ವೀಪಗಳನ್ನಾಳುವ ಮಹಾಬಲ ವಿಜ್ಞಾನಧರರನ್ನು ಬಾಯ್ಕಳಿಸಿ ಆಪ್ತ ಜನ ಪರಿಜನರಿಂದೊಡಗೂಡಿ ಉತ್ತರಾಭಿ ಮುಖವಾಗಿ ಇಂದ್ರನ ಮೇಲೆ ದಂಡೆತ್ತಿ ಹೊರಟು ರೈವತ ನದೀತೀರದಲ್ಲಿ ಬೀಡನ್ನು ಬಿಟ್ಟು ಆ ತೊರೆಯ ಮಳಲಿನ ಪ್ರದೇಶದಲ್ಲಿ ರತ್ನಮಂಟಪವನ್ನೆತ್ತಿಸಿ ಸಿಂಹಾಸನದ ಮೇಲೆ ಮಣಿಮಯ ಜನಪ್ರತಿಮೆಯನ್ನು ಪ್ರತಿಷ್ಟೆ ಮಾಡಿ ಪೂಜಿಸು ತಿದ್ದನು. ಆಗ ಹೊಳೆಯು ತುಂಬಿ ಭೋಂಕನೆ ಪ್ರವಾಹ ಬರಲು ರಾವಣನು ಸಂಭ್ರಮಾಕುಲನಾಗಿ ಆಕಾಶಕ್ಕೆ ನೆಗೆದು ಕಾಲವಲ್ಲದ ಕಾಲದಲ್ಲಿ ಪ್ರವಾಹ ಬಂದ ಕಾರಣವೇನೆಂದರಿಯುವುದಕ್ಕಾಗಿ ದೂತನನ್ನಟ್ಟಿದನು. ಅವನು ತಿಳಿದುಕೊಂಡು ಬ೦ದು ಮಾಹಿಷ್ಮತೀ ಪುರದೊಡೆಯನಾದ ಸಹಸ್ರಬಾಹುವು ಆ ತೊರೆಯನ್ನು ಜಂತ್ರಗಳಿಂದ ಕಟ್ಟಿ ತನ್ನ ಅಂತಃಪುರ ಸ್ತ್ರೀಯರೊಡನೆ ನೀರಾಟವಾಡಿ ಜಂತ್ರ ಗಳನ್ನು ಕಳೆಯಲು ಹೊಳೆಯು ಆ ತೆರನಾಗಿ ಬಂದಿತೆಂದು ತಿಳಿಸಿದನು. ಅದಕ್ಕೆ ರಾವಣನು ಮುನಿದು ತನ್ನ ಪಟ್ಟದಾನೆಯನ್ನೇರಿ ಹೊರಟು ಸಹಸ್ರಬಾಹುವನ್ನು ಸೆರೆಹಿಡಿದು ತಂದನು. ಇದನ್ನು ಕೇಳಿ ಆತನ ತಂದೆಯಾದ ಶತಬಾಹುವೆಂಬ ಜಂಘಚಾರಣನು ಧರ್ಮವಾತ್ಸಲ್ಯದಿಂದ ಬರಲು ದಶಮುಖನು ಆತನಿಗೆ ಭಕ್ತಿಯಿ೦ದೆರಗಿ ವಂದಿಸಿ ಮಣಿಪೀಠದಲ್ಲಿ ಕುಳ್ಳಿರಿಸಿ ಕೈಮುಗಿದುಕೊಂಡು ಅಪ್ಪಣೆ ಏನೆಂದು ಕೇಳಲು ತಾನು ಸೆರೆಗೆಯ್ದ ಸಹಸ್ರಬಾಹುವನ್ನು ಬಿಟ್ಟುಬಿಡೆಂದು ಹೇಳಿದನು. ರಾವಣನು ಮಹಾಪ್ರಸಾದವೆಂದು ಹೇಳಿ ಸಹಸ್ರಬಾಹುವನ್ನು ಕರೆಕಳುಹಿಸಲು ಆತನು ಬಂದು ದಿವ್ಯ ಮುನಿಗೆರಗಿ ಅಪ್ಪಣೆ ಪಡೆದು ಕುಳಿತುಕೊಂಡನು. ರಾವಣನು ಆತನ ಕೈ ಹಿಡಿದು ವಿನಯ ವಚನಗಳನ್ನಾಡಿ ತನ್ನ ರಾಜ್ಯದಲ್ಲಿ ತಾನು