ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೬

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ಬಾಧ್ಯತೆಯನ್ನು ನಿರಾಕರಿಸುವುದು ಅಸ್ವಾಭಾವಿಕ, ಕೃತ್ರಿಮವೆಂದೆನಿಸಬಹುದಿತ್ತು. ಹೀಗಿದ್ದುದರಿಂದ ವರಗಳ ಸಂದರ್ಭವು ಶ್ಲಾಘನೀಯವೆನಿಸುತ್ತದೆ. ಕೈಕೇಯಿಯು ತನ್ನ ಹಟವನ್ನು ಬಿಡಬೇಕೆಂದು ದಶರಥನು ಪರಿಪರಿಯಾಗಿ ಪ್ರಾರ್ಥಿಸಿದನು; ಅಂಗಲಾಚಿ ಬೇಡಿಕೊಂಡನು; ಬೆದರಿಕೆ ಹಾಕಿದನು; ವಿವಾಹ ಸಂಬಂಧವನ್ನು ಕಡಿದುಹಾಕುವೆನೆಂದನು; ಕಟುವಾಗಿ ದಶರಥನು ಮಾತನಾಡಿದನು. ಕೌಸಲ್ಯೆ, ಲಕ್ಷ್ಮಣ, ಸುಮಂತ, ವಸಿಷ್ಠರ ಪ್ರಯತ್ನಗಳೂ ವಿಫಲವಾದವು. ಕೈಕೇಯಿಯು ತನ್ನ ಹಟವನ್ನು ಬಿಡಲಿಲ್ಲ. ಅಷ್ಟೇ ಅಲ್ಲದೇ ವರಗಳಂತೆ ನಡೆದುಕೊಳ್ಳದಿದ್ದರೆ ಪ್ರಾಣತ್ಯಾಗವನ್ನು ಮಾಡುವ ಬೆದರಿಕೆಯನ್ನು ಸಹ ಹಾಕಿದಳು. ಉರಿಯುವಂಥ ತೀಕ್ಷ್ಣ ಶಬ್ದಗಳ ಯಾವ ಪರಿಣಾಮವೂ ಕೈಕೇಯಿಯ ಮೇಲೆ ಆಗಲಿಲ್ಲ. ಅವಳ ಅಭಿಲಾಷೆ-ಹಟಗಳನ್ನು ವಿರೋಧಿಸಬಲ್ಲವನೆಂದರೆ ಭರತ; ಭರತನೇ ತನಗೆ ಯಾವ ರಾಜ್ಯಪದವೂ ಬೇಡವೆಂದಿದ್ದರೆ ಭರತನಿಂದ ಅಡಚಣೆ ಉಂಟಾಗಬಾರದೆಂದು ಬಹು ಚಾತುರ್ಯದಿಂದ ಈ ಮೊದಲೇ ಅವನನ್ನು ತಾತನ ಮನೆಗೆ ಕಳುಹಿಸಲಾಗಿತ್ತು. ಕೈಕೇಯಿಯ ಕಾರ್ಯವು ನಿರ್ವಿಘ್ನವಾಯಿತು. ರಾಮಾಯಣದ ಈ ಮುಂದಿನ ಘಟನೆಗಳಿಗೆ ಕೈಕೇಯಿಯ ಈ ಎರಡು ವರಗಳು ಮೂಲಭೂತವಾಗಿವೆ. 'ಭರತನಿಗೆ ಯುವರಾಜ್ಯಪದ; ರಾಮನಿಗೆ ಹದಿನಾಲ್ಕು ವರ್ಷ ವನವಾಸ'- ಈ ಎರಡು ವರಗಳು ಕೈಕೇಯಿಗೆ ದೊರೆತ ನಂತರವೇ ನಿಜವಾಗಿ ರಾಮಾಯಣವು ಶುರುವಾಯಿತೆನ್ನಬಹುದು.
ದಶರಥನು ಸಂತೋಷಗೊಂಡು ಕೊಡಬಯಸಿದ ಎರಡು ವರಗಳು 'ವರ'ವೆಂದಿರದೇ ಅವು ಕೊಟ್ಟ ವಚನಗಳಂತೆ ಇದ್ದವು; ಎಂದು ಕೆಲವರು ಮಂಡಿಸಬಹುದು. ಈ ಸಂಗತಿಗೆ ಆಧಾರವಿರದ ಕಾರಣ ಈ ಯುಕ್ತಿವಾದವು ಸರಿಯಲ್ಲ. ಈ ವರಗಳ ಉಲ್ಲೇಖವು ಮತ್ತೆ ಮತ್ತೆ ೧೫-೨೦ ಸಲವಾದರೂ ರಾಮಾಯಣದಲ್ಲಿ ಬಂದಿದೆ. ವಾಲ್ಮೀಕಿಯು ಎಲ್ಲೆಡೆಯಲ್ಲಿಯೂ 'ವರ' ಎಂಬ ಪದವನ್ನೇ ಬಳಸಿದ್ದಾನೆ ಹೊರತು 'ವಚನ' ಎಂಬ ಶಬ್ದವನ್ನಲ್ಲ. ಕೆಲವೆಡೆ 'ವರ' ಎಂಬ ಪದವು ಸ್ಪಷ್ಟವಾಗಿರದಿದ್ದರೂ ಅಭಿಪ್ರೇತವಾಗಿದೆ. ಈ 'ವರ'ದ ಪ್ರಪ್ರಥಮ ಉಲ್ಲೇಖವು, ನಾರದನು ಹೇಳಿದ ಸಂಕ್ಷಿಪ್ತ ರಾಮಕಥೆಯ ಬಾಲಕಾಂಡದ ಮೊದಲನೇ ಸರ್ಗದಲ್ಲಿ 'ಪೂರ್ವಂ ದತ್ತ ವರಾ ದೇವೀ' ಎಂದಿದೆ. ದತ್ತೌ ತೇದ್ವೌ ವರೌ' ಎಂದು ಮಂಥರೆ ಆ ವರಗಳ ಜ್ಞಾಪಕವನ್ನು ಕೈಕೇಯಿಗೆ ಮಾಡಿಕೊಳ್ಳುತ್ತಾಳೆ. ವರ ಮತ್ತು ವಚನ ಇವು ಸಮಾನಾರ್ಥವುಳ್ಳ ಶಬ್ದಗಳಲ್ಲ. ವರದ ಪರಿಣಾಮಗಳು ನಿಶ್ಚಿತವಿದ್ದು ಅದರಲ್ಲಿ ಪರಿವರ್ತನೆಗೆ ಆಸ್ಪದವಿಲ್ಲ. ವಚನಭಂಗವನ್ನು