ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶಾಪಾದಪಿ ವರಾದಪಿ!

೮೧

ಸಂದರ್ಭಗಳು ತೀರ ಕಡಿಮೆ; ವಿಧಿ ಇಲ್ಲದೇ ಬ್ರಹ್ಮನು ಶಾಪಗಳನ್ನು ಕೊಡಬೇಕಾಯಿತು. ಒಂದು ಶಾಪವು ರಾವಣನಿಗೆ ಆಗಿದ್ದು, ಇನ್ನೊಂದು ಕುಂಭಕರ್ಣನಿಗೆ ಆಗಿದೆ. ಮಿತಿ ಇಲ್ಲದ ರಾವಣನ ಕಾಮವಾಸನೆಯನ್ನು ಹತ್ತಿಕ್ಕಲೆಂದು ಕೊಟ್ಟ ಶಾಪವು ಕಥೆಯ ದೃಷ್ಟಿಯಿಂದ ಮಹತ್ವದ್ದಿದೆ. ಇದನ್ನು ಮುಂದೆ ವಿವರಿಸಲಾಗಿದೆ. ಈ ಶಾಪವನ್ನು ಕಥೆಯಿಂದ ತೆಗೆದುಹಾಕುವಂತಿಲ್ಲ. ಕುಂಭಕರ್ಣನು ಪ್ರಚಂಡ ಶೂರನು; ಅಸಾಧ್ಯ ಕೃತ್ಯಗಳನ್ನು ಎಸಗುವವನು; ಆತನಿಗೆ ದೀರ್ಘನಿದ್ರೆಯ ಶಾಪವನ್ನು ಕೊಟ್ಟು ಆತನ ಬಲವನ್ನು ನಿರೋಧಿಸಲಾಗಿದೆ. ಇದು ಆವಶ್ಯಕವಾಗಿತ್ತು. ಕುಂಭಕರ್ಣನ ಬಲವನ್ನು ನಿರೋಧಿಸಿದ್ದರಿಂದ ರಾವಣನ ಸಾಮರ್ಥ್ಯವನ್ನು ಉಡುಗಿಸಿದಂತಾಗಿವೆ. ರಾವಣನಿಗೆ ಕಟ್ಟಳೆಯ ಶಾಪ ದೊರಕಿತ್ತು. ತನ್ನ ನಡತೆಯನ್ನು ತಿದ್ದಿಕೊಳ್ಳುವ ಅವಕಾಶ ರಾವಣನಿಗೆ ಇತ್ತು. ರಾವಣ-ಕುಂಭಕರ್ಣರಿಗೆ ಕಠೋರ ಶಿಕ್ಷೆಯನ್ನು ವಿಧಿಸಬೇಕಿತ್ತು; ಆ ದೃಷ್ಟಿಯಿಂದ ಅವರಿಗೆ ದೊರೆತ ಶಾಪಗಳು ತೀರ ಮೃದುವಾಗಿವೆ.

ಶಾಪಗಳನ್ನು ನುಡಿಯುವಾಗ ವಹಿಸಿದ ಎಚ್ಚರಿಕೆಯನ್ನು ಬ್ರಹ್ಮನು ವರಗಳನ್ನು ಕೊಡುವಾಗ ವಹಿಸಿದಂತಿಲ್ಲ. ವರಗಳಿಂದ ಆಗಬಹುದಾದ ಪರಿಣಾಮಗಳ ಬಗ್ಗೆ ಮುಂದಾಲೋಚನೆ ಮಾಡದೆ, ಬ್ರಹ್ಮನು ವರಗಳನ್ನು ಕೊಟ್ಟಂತಿದೆ; ಅನಂತರ ಯೋಚನೆಗೆ ಈಡಾಗಿದ್ದಾನೆ. ಇನ್ನಿತರ ದೇವತೆಗಳು ಕೂಡ ವರಗಳನ್ನೀಯುವುದರಲ್ಲಿ ಮುಂದಾಗಿರುವರಲ್ಲದೆ, ಮುಕ್ತಹಸ್ತರಾದಂತಿದೆ. ಬ್ರಹ್ಮನಿತ್ತ ವರಗಳನ್ನು ನಿರೀಕ್ಷಿಸಿದರೆ ಆತನ ಅಜಾಗರೂಕತೆಯು ಕಂಡುಬರುತ್ತದೆ. ಈತನು ಕುಂಭಕರ್ಣನಿಗೆ ವರವನ್ನು ಕೊಡಲು ಸಿದ್ಧನಾದಾಗ ದೇವತೆಗಳು ಆತನನ್ನು ಪರಾವೃತ್ತಗೊಳಿಸಲು ಯತ್ನಿಸಿದರು. ರಾವಣನಿಗೆ ಲಭಿಸಿದಂತೆ ಕುಂಭಕರ್ಣನಿಗೆ ವರವು ದೊರೆತಿದ್ದರೆ ಖಂಡಿತವಾಗಿ ಸರ್ವನಾಶವಾಗಬಹುದಿತ್ತು. ರಾಮಾಯಣದಲ್ಲಿದ್ದ ಎಂಬತ್ನಾಲ್ಕು ವರಗಳಲ್ಲಿ ದೇವತೆಗಳಿತ್ತ ವರಗಳು ಅರವತ್ತು; ಅದರಲ್ಲಿ ಬ್ರಹ್ಮನ ವರಗಳು ಇಪ್ಪತ್ತಾಗಿವೆ. ಬ್ರಹ್ಮನ ವರಗಳ ಲಾಭವನ್ನು ರಾಕ್ಷಸರು ಹೆಚ್ಚಾಗಿ ಪಡೆದಿದ್ದಾರೆ. ಅದಲ್ಲದೇ ದೇವತೆಗಳಿಗೂ, ಮಾನವರಿಗೂ ತಿರ್ಯಕರಿಗೂ ಬ್ರಹ್ಮನ ವರಗಳ ಲಾಭವಾಗಿದೆ.

ಬ್ರಹ್ಮನು ಮೇಘನಾದನಿಗೆ ಕೊಟ್ಟ ವರದ ಉಲ್ಲೇಖವು ಬೇರೆ ಕಡೆಗೆ ಬಂದಿದೆ. ಅದರ ಬಗ್ಗೆ ಅಧಿಕ ವಿಚಾರ ಮಾಡುವಂತಿದೆ.೫೪ ಈ ವರದ

——————
೫೪. ಯುದ್ಧಕಾಂಡ, ೮೫ ಮತ್ತು ಉತ್ತರಕಾಂಡ, ೩೦.