ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೮೨

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ಸ್ವರೂಪವು ತುಂಬ ಭಿನ್ನವಾಗಿದೆ. 'ವಧೆ', 'ಸಾವು' ಎಂಬುದು ವರದ ಗುಣಭಾಗವೆನಿಸದು; ಬೇಡಿಕೊಂಡ ವರದಲ್ಲಿಯಂತೂ ಅಸಹಜ, ಅಸಾಧ್ಯವಿರುತ್ತದೆ. ಮೇಘನಾದನು ಬೇಡಿಕೊಂಡ ವರವು ಕಟ್ಟಳೆಯದಿತ್ತು. ಅದು ಯಾಚಿತ ವರ; ತನ್ನ ಸಾವನ್ನು ಯಾರೂ ವರವಾಗಿ ಬೇಡುವದಿಲ್ಲ; ಆ ರೀತಿಯ ವರವನ್ನು ಯಾರೂ ಕೊಟ್ಟಿಲ್ಲ. ಈ ರೀತಿಯ ಯಾಚಿತ ವರದ ಹಿನ್ನೆಲೆಯನ್ನು ಪರಿಶೀಲಿಸಬೇಕು. ಇಂದ್ರನನ್ನು ಸೋಲಿಸಿ, ಸೆರೆಹಿಡಿದು ಮೇಘನಾದನು ಆತನನ್ನು ಲಂಕೆಗೆ ಒಯ್ದಿದ್ದನು. ದೇವತೆಗಳ ರಾಜನಾದ ಇಂದ್ರನು ರಾಕ್ಷಸರ ಸೆರೆಯಾಳಾದ್ದರಿಂದ ದೇವತೆಗಳ ಮತ್ತು ಬ್ರಹ್ಮದೇವನ ಪ್ರತಿಷ್ಠೆಗೆ ಕುಂದು ಬಂದಿತು. ಯಾವುದೇ ಉಪಾಯದಿಂದ ಆತನನ್ನು ಬಿಡಿಸುವದು ಆವಶ್ಯಕವಾಗಿತ್ತು. ಕಪ್ಪಕಾಣಿಕೆಗಳನ್ನು ತೆತ್ತು ಇಂದ್ರನನ್ನು ಬಿಡಿಸುವ ಒಂದು ವಿಧವಿತ್ತು. ಆಗ ಬ್ರಹ್ಮನು ನೇರವಾಗಿ ಮೇಘನಾದನನ್ನು ಈ ರೀತಿ ಪ್ರಶ್ನಿಸಿದನು:

          ತನ್ಮುಚ್ಯತಾಂ ಮಹಾಬಾಹೋ ಮಹೇಂದ್ರಃ ಪಾಕಶಾಸನಃ |
          ಕಿಂ ಚಾಸ್ಯ ಮೋಕ್ಷಣಾರ್ಥಾಯ ಪ್ರಯಚ್ಛಂತು ದಿವೌಕಸಃ ॥೭॥

“ಈ ಮಹೇಂದ್ರನನ್ನು ನೀನು ಬಿಟ್ಟುಕೊಡು! ಪ್ರತಿಯಾಗಿ ದೇವತೆಗಳಿಂದ ನೀನು ಬೇಡುವುದೇನು?೫೫ ಈ ರೀತಿ ಪ್ರಶ್ನಿಸಿದ್ದು ಸರಳ ಲೇವಾದೇವಿಯ ವ್ಯವಹಾರದಂತಿದೆ. ಇಂದ್ರನನ್ನು ಬಿಟ್ಟುಕೊಡಲು ತಾನು 'ಅಮರ' ಚಿರಂಜೀವಿ ಯಾಗಬೇಕೆಂದು ಮೇಘನಾದನು ಕೇಳಿದನು. ಮೃತ್ಯುಲೋಕದಲ್ಲಿ ಅಮರ ಪದವು ಸಾಧ್ಯವಿಲ್ಲ; ಎಂದು ಹೇಳಿ ಈ ಅಮರತ್ವಕ್ಕೆ ಮೇರೆ ಹಾಕಲಾಯಿತು. ಆಗ ಇಂದ್ರಜಿತನು ಯಾವ ಸನ್ನಿವೇಶದಲ್ಲಿ ತನ್ನ ವಧೆಯಾಗಬೇಕು- ಆಗಕೂಡದು! ಎಂಬುದನ್ನು ವಿವರಿಸಿದನು. ಬ್ರಹ್ಮನು ಆ ವರವನ್ನ ಕೊಟ್ಟನು (ಯುದ್ಧಕಾಂಡ. ೮೫).

          ನಿಕುಂಭಿಲಾಮಸಂಪ್ರಾಪ್ತಮಕೃತಾಗ್ನಿಂ ಚ ಯೋ ರಿಪುಃ |
          ತ್ವಾಮಾತತಾಯಿನಂ ಹನ್ಯದಿಂದ್ರಶತ್ರೋ ಸ ತೇ ವಧಃ ||೧೪||
          ವರೋ ದತ್ತೋ ಮಹಾಬಾಹೋ ಸರ್ವಲೋಕೇಶ್ವರೇಣ ವೈ ||೧೫||

“ಹೇ ಇಂದ್ರಜಿತನೇ! ನಿಕುಂಭಿಲೆಗೆ ಹೋಗಿ ನೀನು ಹವನವನ್ನಾಚರಿಸುವ ಮೊದಲು ಶಸ್ತ್ರಧರಿಯಾದ ನಿನ್ನ ಜೊತೆ ಯಾವ ಶತ್ರುವು ಯುದ್ಧ ಮಾಡುವನೋ

——————
೫೫. ವರ ಕ್ರ. ೬೫.