ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೮೬

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

          ಯದಹಂ ಗಾತ್ರಸಂಸ್ಪರ್ಶಂ ರಾವಣಸ್ಯ ಗತಾ ಬಲಾತ್ |
          ಅನೀಶಾ ಕಿಂ ಕರಿಷ್ಯಾಮಿ ವಿನಾಥಾ ವಿಮಶಾ ಸತೀ ||

“ಪತಿಯಲ್ಲಿ ಪರಮಭಕ್ತಿ ಇರುವುದರಿಂದ ರಾಮನ ಹೊರತು ಯಾರನ್ನೂ ಸ್ಪರ್ಶಿಸುವ ಇಚ್ಛೆಯು ನನಗಿಲ್ಲ. ರಾವಣನ ಸ್ಪರ್ಶವು ನನಗಾಗಿದ್ದರೂ ಅದು ನನ್ನ ಮನಸ್ಸಿನ ವಿರುದ್ಧ ನಡೆದಿದೆ. ನಾನು ಅನಾಥೆ, ಅಬಲೆ, ಪರಾಧೀನಳು; ಹೀಗಿರುವಾಗ ನಾನು ಏನು ಮಾಡಬಲ್ಲೆ?೬೦ ಆಕೆಯ ಮನಸ್ಸಿನ ವಿರುದ್ಧವಾಗಿ ರಾವಣನ ಸ್ಪರ್ಶವಾಗಿದೆ; ವಿರಾಧನ ಸ್ಪರ್ಶ ನಡೆದಿದೆ; ಕಾಗೆಯ ರೂಪವನ್ನು ತಾಳಿದ ಇಂದ್ರಪುತ್ರನ ಸ್ಪರ್ಶವಾದ ಸ್ಪಷ್ಟ ಉಲ್ಲೇಖವು ರಾಮಾಯಣದಲ್ಲಿದೆ. ಪತಿವ್ರತೆಗೆ ಪರಪುರುನ ಸ್ಪರ್ಶವು ನಿಷಿದ್ಧವಿತ್ತೆಂಬುದು ಸ್ಪಷ್ಟವಾಗುತ್ತದೆ.

ಸ್ತ್ರೀಯರ ಶಾಪ ಮತ್ತು ವರ

ಸೀತೆಯ ಪಾತಿವ್ರತ್ಯದ ಬಗ್ಗೆ ವಿಚಾರ ಮಾಡುವುದೆಂದರೆ ರಾಮಾಯಣದಲ್ಲಿಯ ಸ್ತ್ರೀಯರು ಕೊಟ್ಟ ಶಾಪ-ವರಗಳನ್ನು ಪರಿಶೀಲಿಸುವದು ಅತ್ಯಗತ್ಯ. ಸ್ತ್ರೀಯರು ಕೊಟ್ಟ ಶಾಪಗಳ ಸಂಖ್ಯೆ ಏಳು; ವರಗಳ ಸಂಖ್ಯೆ ಐದು. ಪಂಚಪತಿವ್ರತೆಯರಲ್ಲಿಯ ಮೂವರಾದ ಅಹಲ್ಯೆ, ಮಂಡೋದರಿ ಮತ್ತು ಸೀತೆ ಇವರು ಯಾರಿಗೂ ಶಾಪ-ವರಗಳನ್ನು ಕೊಟ್ಟಿಲ್ಲ. ಪಾತಿವ್ರತ್ಯದಿಂದ ಶಾಪ-ವರಗಳನ್ನೀಯುವ ಅರ್ಹತೆಯುಂಟಾಗುತ್ತಿತ್ತೆಂದು ಹೇಳಲಾಗುವುದಿಲ್ಲ. ಕುಶಕನ್ಯೆ ಮತ್ತು ವೇದವತಿ ಇವರು ಅವಿವಾಹಿತರಿದ್ದರು. ಅಂದಬಳಿಕ ಅವರಲ್ಲಿದ್ದ ಈ ಸಾಮರ್ಥ್ಯವು ಪಾತಿವ್ರತ್ಯದಿಂದಲ್ಲ ಎಂಬುದು ಖಂಡಿತ. (ವೇದವತಿಯು ಶಾಪ ಕೊಡದೇ ರಾವಣನ ವಧೆಯ ಸಲುವಾಗಿ ಶಾಪದಷ್ಟೇ ಪ್ರಖರ ಪ್ರತಿಜ್ಞೆಯನ್ನು ಮಾಡಿದ್ದಾಳೆ.) ಅಷ್ಟೇ ಅಲ್ಲದೆ, ಅವರು ಪ್ರತ್ಯಕ್ಷವಾಗಿ ಶಾಪಗಳನ್ನು ಕೊಟ್ಟಿಲ್ಲ; ಆದರೆ ಅವರ ಬಳಿ ಅಷ್ಟೊಂದು ಸಾಮರ್ಥ್ಯವಿತ್ತೆಂಬ ಉಲ್ಲೇಖ ಮಾತ್ರ ಕಂಡು ಬರುತ್ತದೆ. ರಾಮನಿಗೆ ಯುವರಾಜ್ಯಾಭಿಷೇಕವು ನಡೆಯಲಿದೆ ಎಂಬ ಸುವಾರ್ತೆಯನ್ನು ಮಂಥರೆಯು ಪ್ರಥಮವಾಗಿ ಕೈಕೇಯಿಗೆ ತಿಳಿಸಿದಳು. ಸಂತುಷ್ಟಳಾದ ಕೈಕೇಯಿಯು ಮಂಥರೆಗೆ ವರವನ್ನು ಕೊಡಬಯಸಿದಳು, ಮಂಥರೆಯು ಆ ವರವನ್ನು ಸ್ವೀಕರಿಸಲಿಲ್ಲ; ಅದು ಬೇರೆ ಸಂಗತಿಯಾಗಿದೆ.

——————
೬೦. ಸುಂದರಕಾಂಡ,