ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶಾಪಾದಪಿ ವರಾದಪಿ!

೮೯

ಪತಿವ್ರತೆ. ರಾಮಾಯಣದಲ್ಲಿಯ ಅವಳ ಸ್ಥಾನ ಅತ್ಯಂತ ಗೌಣ; ಅವಳ ವ್ಯಕ್ತಿಚಿತ್ರಣವು ಸ್ಪಷ್ಟಗೊಂಡಿಲ್ಲ; ಪೂರ್ತಿಯಾಗಿಲ್ಲ. ರಾವಣನ ವಧೆಯನಂತರ ಅವಳ ವಿಲಾಪದಿಂದ ಅವಳ ಸ್ವಭಾವ-ವೈಶಿಷ್ಟ್ಯಗಳು ಎದ್ದು ಕಾಣುತ್ತವೆ. ತನ್ನ ಪಾತಿವ್ರತ್ಯದ ಬಲದಿಂದ ರಾವಣನ ಅಧಃಪತನವನ್ನು ಅವಳು ತಡೆಯಬಹುದಿತ್ತು. ಅವಳು ಆ ರೀತಿ ಪ್ರಯತ್ನಿಸಿದ್ದರೂ ಅವಳಿಗೆ ಸಾಧ್ಯವಾಗಲಿಲ್ಲ. ಸಾವಿತ್ರಿಯು ತನ್ನ ಪಾತಿವ್ರತ್ಯದಿಂದ ಪತಿಯ ಪ್ರಾಣವನ್ನು ಉಳಿಸಿಕೊಂಡಳೆಂಬ ಪ್ರತೀತಿಯಿದೆ. ಮಂಡೋದರಿಗೆ ಅದು ಸಾಧ್ಯವಾಗಲಿಲ್ಲ. ಸಾವಿತ್ರಿಯು ತನ್ನ ಗಂಡನನ್ನು ಬದುಕಿಸಿದ್ದು ಪಾತಿವ್ರತ್ಯದಿಂದಲೋ ಅಥವಾ ಬುದ್ಧಿಚಾತುರ್ಯದಿಂದಲೋ ಎಂಬ ಬಗ್ಗೆ ಮತಭೇದಗಳು ಉಂಟಾಗಬಹುದು.

ರಾಮನು ಆದರ್ಶ ಪುತ್ರ, ಪತಿ, ಬಂಧು, ಶಾಸಕ, ಅಜ್ಞಾಧಾರಕ, ಸತ್ಯನಿಷ್ಠ, ಏಕಬಾಣ, ಏಕವಚನಿ, ಏಕಪತ್ನೀವ್ರತಸ್ಥ ಮತ್ತು ಶುದ್ಧಚಾರಿತ್ರ್ಯವುಳ್ಳನೆಂಬ ತುಲನಾತೀತ ಗುಣಮೂರ್ತಿಯಾಗಿದ್ದನು. ಸೀತೆಯು ಕೂಡ ಸತ್ಯವಂತೆ, ಧೈರ್ಯದಿಂದ ಸಂಕಷ್ಟಗಳನ್ನು ಎದುರಿಸುವವಳು. ಹೆಸರಾಂತ ತ್ಯಾಗಿಯು, ನಿಃಸ್ಫೃಹಳು ಮತ್ತು ನಿಷ್ಠಾವಂತ ಪತಿವ್ರತೆಯಾಗಿದ್ದಳು. ಅವಳ ಕಲಂಕರಹಿತ ಚಾರಿತ್ರ್ಯ ಮತ್ತು ರಾಮನಲ್ಲಿದ್ದ ಅದ್ವಿತೀಯ ಪ್ರೀತಿಯು ರಾಮಕಥೆಗೆ ಮೂಲಾಧಾರವಾಗಿದೆ. ಸೀತೆಯ ಶುದ್ಧತೆಯ ಬಗ್ಗೆ ಸಾರಿ ಹೇಳುವಾಗ ವಾಲ್ಮೀಕಿಯು ತನ್ನ ತಪೋಬಲವನ್ನೇ ಪಣವಾಗಿ ಇಟ್ಟಿದ್ದಾನೆ. ರಾವಣನು ಅವಳನ್ನು ಕೊಂಡೊಯ್ದ ನಂತರ ಆತನ ವಧೆಯಾಗುವವರೆಗಿನ ಯಾವ ಗಳಿಗೆಯಲ್ಲಿಯೂ ಅವಳು ಅವನಿಂದ ಭ್ರಷ್ಟಳಾಗಬಹುದಿತ್ತು. ಅಷ್ಟೊಂದು ಪ್ರತಿಕೂಲಪರಿಸ್ಥಿತಿಯಲ್ಲಿ ಅವಳಿದ್ದಳು; ಆದರೆ, ರಾವಣನಿಗೆ ಎಲ್ಲವೂ ಅನುಕೂಲವಾಗಿತ್ತು; ಅಂಥ ಸ್ಥಿತಿಯಲ್ಲಿ ಶೀಲಸಂರಕ್ಷಣೆಯನ್ನು ಮಾಡಿ ಕೊಳ್ಳುವದು ಸೀತೆಗೇ ಬಹಳೇ ಕಠಿಣವಿತ್ತು. ಅವಳ ಶೀಲ ರಕ್ಷಣೆಯು ಕತೆಯ ದೃಷ್ಟಿಯಿಂದ ಮಹತ್ವದ್ದಾಗಿತ್ತು. ಅವಳ ಶೀಲಕ್ಕೆ ಕುಂದುಬಂದಿದ್ದರೆ ಈ ಕಥೆಯ ನೈತಿಕ ಅಧಿಷ್ಠಾನವೇ ಕುಸಿಯುವದೆಂಬ ಭೀತಿ, ವಾಲ್ಮೀಕಿಯ ಕೊರಗಾಗಿತ್ತು. ಕಾವ್ಯಾತ್ಮನ್ಯಾಯದ (Poetic justice) ದೃಷ್ಟಿಯಿಂದ, ಸೀತೆಯು ಶೀಲಭ್ರಷ್ಟೆಯಾಗುವುದು ಯೋಗ್ಯವಾಗುತ್ತಿರಲಿಲ್ಲ. ಭ್ರಷ್ಟಳಾದ ಸೀತೆಯನ್ನು ಬಿಡಿಸಿ ತರುವುದರಲ್ಲಿ ಸ್ವಾರಸ್ಯವು ಉಳಿಯುತ್ತಿರಲಿಲ್ಲ. ಅಪರಾಧಿಯಾದವನನ್ನು ಶಿಕ್ಷಿಸಿ, ಸೀತೆಯನ್ನು ಮುಕ್ತಗೊಳಿಸಿದಾಗಲೂ ಕಥೆಯು ರಸಹೀನವಾಗುತ್ತಿತ್ತು. ಸೀತೆಯು ಶುದ್ಧಚಾರಿತ್ರ್ಯ ವನ್ನುಳಿಸಿಕೊಂಡಿದ್ದಾಳೆ ಎಂದು ರಾಮನಿಗೆ ದೃಢನಂಬಿಕೆಯಿದ್ದರೂ, ಲೋಕಾಪವಾದವನ್ನು ತಡೆಯಲು ರಾಮನು ಅವಳಿಗೆ ಅಗ್ನಿದಿವ್ಯವನ್ನು ಮಾಡಲು ಬಲವಂತ