ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೧೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ
ಶಾಪಾದಪಿ ವರಾದಪಿ!
೯೧
 

ಕಾರಣವೇನೆಂದರೆ, ಅವಳು ಆತನಿಗೆ ಪತ್ನಿಯೆಂದು ಬೇಕಾಗಿದ್ದಳು. ಸದಾಕಾಲವೂ ಅವಳನ್ನು ಉಪಭೋಗಿಸಬೇಕೆಂಬ ಲಾಲಸೆ ಅವನದಾಗಿತ್ತು. “ಭಾರ್ಯಾ ಮೇ ಭವ ಸುಶ್ರೋಣಿ ಯಥಾ ಮಂಡೋದರೀ ತಥಾ “ಹೇ ಸುಂದರಿ! ಮಂಡೋದರಿಯು ಹೇಗೋ ಹಾಗೆ ನೀನು ನನ್ನ ಪತ್ನಿಯಾಗು!” ಎಂಬ ಸ್ಪಷ್ಟ ಉಲ್ಲೇಖವು ಮಹಾಭಾರತದ ವನಪರ್ವದಲ್ಲಿ (೨೮೧-೧೬) ಬಂದಿದೆ. ತನ್ನ ಐಶ್ವರ್ಯ-ವೈಭವಗಳಿಂದ ಅವಳ ಮನಸ್ಸನ್ನು ಸೆಳೆಯಬೇಕೆಂದು ಆತನು ಬಯಸಿದ್ದನು; ಆ ಕಾರಣ ಅನ್ಯಸ್ತ್ರೀಯರನ್ನು ಬಲಾತ್ಕರಿಸಿದಂತೆ ಸೀತೆಯೊಡನೆ ನಡೆದುಕೊಂಡಿಲ್ಲ. ರಾವಣನ ವಧೆಗೆ ತಕ್ಕ ಪರಿಸ್ಥಿತಿ ಒದಗಲು, ಸೀತೆಯು ಲಂಕೆಯಲ್ಲಿರುವದು ಆವಶ್ಯಕವಿತ್ತು. ರಾವಣನು ಸೀತೆಯನ್ನು ಲಂಕೆಗೆ ಸಾಗಿಸಿದ ಘಟನೆಯು ರಾಮ-ರಾವಣರ ಯುದ್ಧಕ್ಕೆ ಪ್ರಮುಖ ಕಾರಣವಯಿತು.
ತನ್ನನ್ನು ಪತಿಯಾಗಿ ಸ್ವೀಕರಿಸಬೇಕೆಂದು ರಾವಣನು ಸೀತೆಯ ಬಳಿ ಮಾಡಿದ ಎಲ್ಲ ಪ್ರಯತ್ನಗಳು ವಿಫಲವಾದವು; ಅಷ್ಟೇ ಅಲ್ಲದೆ, ಸೀತೆಯು ಆತನನ್ನು ಬಿರುಸಾದ ವಚನಗಳಿಂದ ತಿರಸ್ಕರಿಸಿದಳು. ಆತನು ಅವಳನ್ನು ಕ್ರೂರ ರಾಕ್ಷಸಿಯರ ಸರ್ಪಕಾವಲಿನಲ್ಲಿಟ್ಟನು. ಯಾರ ಕಣ್ಣಿಗೂ ಅವಳ ನಖದರ್ಶನ ಕೂಡ ಆಗಬಾರದಂತೆ ಭದ್ರವ್ಯವಸ್ಥೆ ಮಾಡಿದನು. ಹೀಗಿದ್ದರೂ ಹನುಮಂತ ಮತ್ತು ಇಂದ್ರ ಇವರು ರಾವಣನಿಗೆ ಸುಳಿವು ಕೊಡದೆ ಸೀತೆಯನ್ನು ಭೇಟಿಯಾಗಿ ಅವಳ ನೈತಿಕ ಧೈರ್ಯವನ್ನು ಹೆಚ್ಚಿಸಿದರು. ಇಷ್ಟೊಂದು ಕಾವಲಿನಲ್ಲಿದ್ದ ಸೀತೆಯ ಶೀಲಗೆಡದೆ ಉಳಿದದ್ದು ಸೋಜಿಗವಾಗಿದೆ. ಈ ಅಬಲೆಯ ಪ್ರತೀಕಾರವನ್ನು ರಾವಣನು ದುರ್ಲಕ್ಷ್ಯಿಸಬಹುದಿತ್ತು. ಇಂಥ ಪರಿಸ್ಥಿತಿಯಲ್ಲಿ ಸೀತೆಯ ಮುಂದೆ ಎರಡು ಮಾರ್ಗಗಳಿದ್ದವು- ಆತ್ಮಹತ್ಯೆ ಇಲ್ಲವೇ ರಾವಣನಿಗೆ ಶರಣಾಗುವದು.

ಸೀತೆಯ ಆತ್ಮಹತ್ಯೆಯ ಪ್ರಯತ್ನಗಳು
ರಾವಣನು ತನ್ನನ್ನು ಕೊಲ್ಲಬಹುದೆಂಬ ಅಂಜಿಕೆಯು ಸೀತೆಗೆ ಇತ್ತು. ಹೀಗೆ ಸಾಯುವ ಬದಲು ಆತ್ಮಹತ್ಯೆ ಮಾಡಿಕೊಳ್ಳುವುದು ಲೇಸೆಂದು ಭಾವಿಸಿದಳು. ಬದುಕಿಗೆ ಬೇಸತ್ತು ಅವಳು ಎರಡು ಬಾರಿ ಆತ್ಮಹತ್ಯೆಯ ಪ್ರಯತ್ನವನ್ನು ಮಾಡಿದಳು.

          ಶೋಕಾಭಿತಪ್ತಾ ಬಹುಧಾ ವಿಚಿಂತ್ಯ ಸೀತಾಥ ವೇಣೀಗ್ರಥನಂ ಗೃಹೀತ್ವಾ |
          ಉದ್ಬದ್ಧ್ಯ ವೇಣ್ಯುದ್ಗ್ರಥನೇನ ಶೀಘ್ರಮಹಂ ಗಮಿಷ್ಯಾಮಿ ಯಮಸ್ಯ ಮೂಲಮ್ ||