ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೯೨

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ಈ ರೀತಿ ಶೋಕಸಂತಪ್ತಳಾದ ಸೀತೆಯು ಬಗೆಬಗೆಯಿಂದ ಆಲೋಚಿಸಿ ತನ್ನ ವೇಣೀಗ್ರಥನದಿಂದ (ಮಂಡಿಯನ್ನು ಕಟ್ಟುವ ನಾರು) “ನಾನು ಕೂಡಲೇ ಯಮಸದನವನ್ನು ತಲುಪುವೆ" ಎಂದು ಹೇಳಿ ಮರದ ರೆಂಬೆಯನ್ನು ಕೈಯಲ್ಲಿ ಹಿಡಿದು ಪ್ರಾಣತ್ಯಾಗ ಮಾಡುವವಳಿದ್ದಳು.೬೬ ಅಷ್ಟರಲ್ಲಿ ಸೀತೆಯ ಹಾಗು ರಾಮಾಯಣದ ಸುದೈವದಿಂದ ಆಕೆಗೆ ಕೆಲವು ಶುಭಶಕುನಗಳಾದವು. ಅವಳ ಮನೋಧೈರ್ಯವು ಬೆಳೆಯಿತು. ಆತ್ಮಹತ್ಯೆಯ ವಿಚಾರವನ್ನು ಮುಂದೂಡಿದಳು. ರಾವಣನ ವಧೆ ರಾಮನಿಂದಾಗುವವರೆಗೆ ಸೀತೆ ಹಾಗೂ ರಾವಣ ಇಬ್ಬರೂ ಜೀವಿಸಿರುವುದು ಮತ್ತು ಸೀತೆಯು ಭ್ರಷ್ಟಳಾಗದೇ ಉಳಿದಿರುವುದು ಕಥೆಗೆ ಅವಶ್ಯಕವಾಗಿತ್ತು. ಅವಳ ಸಾವು ಕಥೆಗೆ ಪೋಷಕವಾಗುತ್ತಿರಲಿಲ್ಲ. ಸಮಯಕ್ಕೆ ಸರಿಯಾಗಿ ಶುಭಶಕುನಗಳನ್ನು ಯೋಜಿಸಿ, ಸೀತೆಯ ಆತ್ಮಾರ್ಪಣೆಯ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ. ಇನ್ನೊಂದು ಸಂದರ್ಭದಲ್ಲಿ ಸೀತೆ ಆಮರಣ ಉಪವಾಸವನ್ನು ಪ್ರಾರಂಭಿಸಿದಾಗ ಬ್ರಹ್ಮದೇವನಿಗೆ ಚಿಂತೆಯಾಯಿತು. ಅತನು ಹವಿಷ್ಯಾನ್ನವನ್ನು ಸೀತೆಗೆ ತಲುಪಿಸಲೆಂದು ಇಂದ್ರನನ್ನು ಲಂಕೆಗೆ ಕಳಿಸಿದನು. ಅನಂತಕಾಲದವರೆಗೆ ನೀರು, ಆಹಾರವಿರದೇ ಮನುಷ್ಯನನ್ನು ಜೀವಂತವಾಗಿರಿಸುವ ಅದ್ಭುತಶಕ್ತಿಯು ಹವಿಷ್ಯಾನದಲ್ಲಿರುತ್ತದೆ. ಸೀತೆಯು ಈ ಹವಿಸ್ಕಾನ್ನವನ್ನು ಸ್ವೀಕರಿಸಿದ್ದರಿಂದ ಆಕೆಯ ಆಮರಣ ಉಪವಾಸವು ವಿಫಲಗೊಂಡಿತು. ಹೀಗಾಗಿ ಅವಳ ಆತ್ಮಹತ್ಯೆಯ ಎರಡನೆಯ ಪ್ರಯತ್ನವೂ ಸಫಲವಾಗಲಿಲ್ಲ.

ಪಾತಿವ್ರತ್ಯದವೆಂದು ಹೇಳಲ್ಪಟ್ಟ ಫಲ-ಬಲಗಳು
ರಾವಣನ ಇಚ್ಛೆಗೆ ಶರಣಾಗುವ ಹೊರತು ಸೀತೆಗೆ ವಿಧಿಯಿರಲಿಲ್ಲ; ಆತನ ವಧೆಯಾಗುವವರೆಗೆ ಶೀಲವನ್ನು ಕಾಯ್ದುಕೊಂಡು ಸೀತೆಯು ಜೀವಿಸಿರುವಂತೆ ಮಾಡುವ ಜಟಿಲ ಸಮಸ್ಯೆ ವಾಲ್ಮೀಕಿಯದಾಗಿತ್ತು. ಭಾರತೀಯ ಜೀವನಕ್ರಮದಲ್ಲಿ ಪಾತಿವ್ರತ್ಯಕ್ಕೆ ಅತಿ ಘನತೆ-ಗೌರವಗಳುಂಟು. ಪತಿವ್ರತೆಯು ಅಸಾಧ್ಯವಿದ್ದುದನ್ನು ಸಾಧಿಸುವ ಶಕ್ತಿಯನ್ನು ಹೊಂದಿರುತ್ತಾಳೆ ಎಂಬ ಶ್ರದ್ಧೆ ಎಲ್ಲರಲ್ಲಿತ್ತು. ಪ್ರತಿಕೂಲ ಪರಿಸ್ಥಿತಿಯಲ್ಲಿ ಕೂಡ ತನ್ನ ಪಾತಿವ್ರತ್ಯದ ಫಲದಿಂದ ಭ್ರಷ್ಟಳಾಗದೆಯೆ ಲಂಕೆಯಲ್ಲಿ ಸಹಜವಾಗಿ ಇರಬಹುದಿತ್ತೆಂಬ ನಂಬಿಕೆಯು, ಕುರುಡುನಂಬಿಕೆ ಎಂದೆನನ್ಬಹುದು. ಇದಕ್ಕೆ ಯಾವ ಆಧಾರವೂ ಇಲ್ಲ. ಸೀತೆ (ಉತ್ತರಕಾಂಡದಲ್ಲಿಯ), ಅಹಲ್ಯೆ

——————
೬೬. ಸುಂದರಕಾಂಡ, ೨೮.