ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೯೬

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ಅನುವಾದದಲ್ಲಿ ಪಾತಿವ್ರತ್ಯ ಶಬ್ದವು ಸರಿಯಲ್ಲ. ವಾಲ್ಮೀಕಿಯು ಪಾತಿವ್ರತ್ಯವನ್ನು ಉಲ್ಲೇಖಿಸಿಲ್ಲ; ತದ್ವಿರುದ್ಧ ತಪಸ್ಸು ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದಾನೆ. ಗೀತಾ ಪ್ರೆಸ್ ಗೋರಖಪುರ (ಹಿಂದಿ) ಮತ್ತು ಡಾ|| ಶ್ರೀನಿವಾಸ ಅಯ್ಯಂಗಾರ್ ಇವರ ಕನ್ನಡ ಅನುವಾದದಲ್ಲಿ 'ಪಾತಿವ್ರತ್ಯ'ವನ್ನು ಉಲ್ಲೇಖಿಸಿಲ್ಲ. ರಾವಣನನ್ನು ಸುಟ್ಟುಹಾಕುವ ಸೀತೆಯ ನುಡಿಯು ಓಜಸ್ಸಿನೆಂದೆನಿಸಿದರೂ ಕೃತಿಯಲ್ಲಿ ಯಾವ ಪ್ರಭಾವವನ್ನೂ ಬೀರಲಿಲ್ಲ. ಸೀತೆಯ ಸ್ವಂತ ಹೇಳಿಕೆಯಂತೆ, ಅವಳಲ್ಲಿ ಬೇರೆ ಯಾವದೇ ಬಗೆಯ ಸಾಮರ್ಥ್ಯವಿದ್ದರೂ ಅದು ತಪಸ್ಸಿನಿಂದ ದೊರೆತ ಫಲವಾಗಿದೆ.

ರಾವಣನು ಎಸಗಿದ ಬಲಾತ್ಕಾರಗಳು
ಸ್ತ್ರೀಯರ ಮೇಲೆ ಬಲಾತ್ಕಾರವನ್ನು ಮಾಡುವುದರಲ್ಲಿ ರಾವಣನದು ಎತ್ತಿದ ಕೈ. ಅಷ್ಟೇ ಅಲ್ಲದೆ ಅದು ಅವನ ಚಟವಾಗಿತ್ತು. ಲಂಕೆಯಲ್ಲಿಯ ಹಾಗೂ ಇನ್ನಿತರ ನಾರಿಯರನ್ನು ಆತನು ಮನಬಂದಂತೆ ಉಪಭೋಗಿಸಿದ್ದಾನೆ. ಸ್ತ್ರೀಯರನ್ನು ಕೆಡಿಸುವದು, ತನ್ನ ಮನಸೇಚ್ಛೆಯಂತೆ ಬಲಾತ್ಕರಿಸುವದು ಪಾಪಕರ್ಮವೆಂದು ಆತನು ಈ ರೀತಿ ಹೇಳಿದ್ದಾನೆ:

           ಸ್ವಧರ್ಮೋ ರಕ್ಷಸಾಂ ಭೀರಂ ಸರ್ವದೈವ ನ ಸಂಶಯಃ |
           ಗಮನಂ ವಾ ಪರಸ್ತ್ರೀಣಾಂ ಹರಣಂ ಸಂಪ್ರಮಥ್ಯ ವಾ ||

“ಬಲಾತ್ಕಾರದಿಂದ ಪರಸ್ತ್ರೀಯರನ್ನು ಅಪಹರಿಸುವುದು ಮತ್ತು ಅವರನ್ನು ಉಪಭೋಗಿಸುವುದು ಸದಾಕಾಲ ರಾಕ್ಷಸರ ಕುಲಧರ್ಮ."೭೦ ರಾವಣನ ಈ ಅಧರ್ಮ ಕೃತ್ಯವು ಆತನ ಕ್ರೌರ್ಯಕ್ಕಿಂತ ಮಿಗಿಲಾಗಿ ಸ್ತ್ರೀಯರನ್ನು ಹಿಂಸಿಸುತ್ತಿತ್ತು. ಸ್ತ್ರೀಯರನ್ನು ಬಲಾತ್ಕರಿಸುವಾಗ ಅವರ ಪತಿಯರ, ಆಪ್ತೇಷ್ಟರ ಪರಿವೆ ಅವನಿಗಿರುತ್ತಿರಲಿಲ್ಲ. ಅವರ ಪತಿಯರನ್ನು ಕೊಂದು ಅವರನ್ನು ವಿಧವೆಯರನ್ನಾಗಿ ಮಾಡುವುದಲ್ಲದೇ ಅವರ ಆಪ್ತೇಷ್ಟರನ್ನು ಕೊಂದು ಅವರನ್ನು ಪೂರ್ಣ 'ನಿರಾಶ್ರಿತೆ'ಯರನ್ನಾಗಿ ಮಾಡುತ್ತಿದ್ದನು. ಈತನಿಂದ ಭ್ರಷ್ಟರಾದ ಅನೇಕ ಸಾಧ್ವಿಯರು ಶ್ರೇಷ್ಠರಾಗಿದ್ದರು. ಅವರ ಬಗ್ಗೆ ಮಂಡೋದರಿಯ ಉದ್ಗಾರಗಳು ಸೂಚಕವಾಗಿವೆ:

——————
೭೦. ಸುಂದರಕಾಂಡ, ೨೦.