ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೨೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ
ಶಾಪಾದಪಿ ವರಾದಪಿ!
೧೦೧
 

ವ್ಯಾಸ-ವಾಲ್ಮೀಕಿಯರಂಥ ಮಹಾಪುರುಷರು ತಮ್ಮ ಗ್ರಂಥರಚನೆಯಲ್ಲಿ ಶಾಪ-ವರಗಳನ್ನು ಮುಕ್ತಹಸ್ತದಿಂದ ಬಳಸಿದ್ದಾರೆ. ಶಾಪ-ವರಗಳ ಸಂಕಲ್ಪನೆಯು ಮಾನವನ ಪ್ರವೃತ್ತಿಗೆ ಸಂಬಂಧಿತವಾಗಿದೆ. ಇವು ಕಥೆಯಿಂದ ತೆಗೆದುಹಾಕುವಂತಿಲ್ಲ. ಋಷಿಗಳ ಬುದ್ಧಿಯ ಕೌಶಲ್ಯದಿಂದ ಅವು ಕೃತ್ರಿಮವೆಂದೆನಿಸುವುದಿಲ್ಲ. ಕೆಲವು ಶಾಪ-ವರಗಳನ್ನಂತೂ ಕಥೆಯಿಂದ ಬಿಟ್ಟುಕೊಡುವದು ಸುತರಾಂ ಸಾಧ್ಯವಿಲ್ಲ. ಅವುಗಳ ಯೋಜನಕತೆಯು ಮಹತ್ತ್ವದ್ದಾಗಿದೆ. ಶ್ರೀ ಮ.ರಂ. ಶಿರವಾಡಕರ ಎಂಬವರು ಮಹಾಭಾರತದ ಸಂದರ್ಭದಲ್ಲಿ ಈ ರೀತಿ ಬರೆದಿದ್ದಾರೆ:
“ವರ ಹಾಗೂ ಶಾಪ ಇವು ಲೇಖಕರ ಕಲ್ಪನಾವಿಲಾಸದ ಆವಿಷ್ಕೃತಿಯಾಗಿವೆ. ಇದೊಂದು ಪ್ರಕಾರದ ಭಾಷೆಯಲ್ಲಿಯ ಅಲಂಕಾರವೆಂದೆನ್ನಬಹುದು. ಅವುಗಳ ಉಗಮವು ಕರ್ಮವಾದದಲ್ಲಿ ಸಿದ್ಧಾಂತದಿಂದಾಗಿದೆ.೭೫ ಈ ವಿಧಾನವನ್ನು ಸ್ವಲ್ಪಮಟ್ಟಿಗೆ ವಿವರವಾಗಿ ಅಭ್ಯಸಿಸಬೇಕು. ಕಲ್ಪನಾವಿಲಾಸ ಅಥವಾ ಅಲಂಕಾರ ಇವುಗಳಿಂದ ಲೇಖನ ಸೌಂದರ್ಯವು ವರ್ಧಿಸುತ್ತದೆ; ಅವುಗಳ ಅಭಾವವಿದ್ದರೆ ಸೌಂದರ್ಯ ಹಾನಿಯಾಗುತ್ತದೆ; ಆದರೆ ಅವು ಬೇರ್ಪಡಿಸದಂಥ ಭಾಗವಾಗುವುದಿಲ್ಲ. ಶಾಪ-ವರಗಳು ಯಾವಾಗಲೂ ಹೊರಗಿನವು; ಅವುಗಳನ್ನು ಸೇರಿಸಿ ಕೊಳ್ಳಬಹುದು ಇಲ್ಲವೇ ತೆಗೆದುಹಾಕಬಹುದು; ಏಕೆಂದರೆ ಅವು ಕೃತ್ರಿಮವಾಗಿರುತ್ತವೆ. ಅಂತರಂಗದೊಡನೆ ಬೆರೆತಿರುವುದಿಲ್ಲ; ಸಾಮರಸ್ಯವನ್ನು ಹೊಂದುವದಿಲ್ಲ. ನಿಜವಾಗಿ ಶಾಪ-ವರಗಳು ಈ ರೀತಿಯಾಗಿವೆಯೇ? ರಾಮಾಯಣದಲ್ಲಿಯ ದಶರಥನು ಕೈಕೇಯಿಗೆ ಕೊಟ್ಟ ವರಗಳನ್ನು ತೆಗೆದುಹಾಕಬಹುದೇ? ಹಾಗೆ ಮಾಡಿದರೆ ಕಥೆಯಲ್ಲಿ ಉಳಿಯುವದಾದರೂ ಏನು? ಬ್ರಹ್ಮದೇವನು ರಾವಣನಿಗೆ ಕೊಟ್ಟ ವರ ಮತ್ತು ಶಾಪಗಳು ಆಲಂಕಾರಿಕವಾಗಿವೆಯೇ? ಅವುಗಳನ್ನು ಬಿಟ್ಟು ಕೊಟ್ಟರೆ ಕಥೆಯ ಪಾಡೇನಾಗಬಹುದು? ಬ್ರಹ್ಮನ ಶಾಪದ ಭಯವು ರಾವಣನಿಗೆ ಎಷ್ಟೊಂದಿತ್ತು ಎಂಬುದನ್ನು ಗಮನಿಸಿದ್ದೇವೆ. ಈ ಶಾಪದ ಜೊತೆ ನಲಕೂಬರನು ಕೊಟ್ಟ ಶಾಪ ಮತ್ತು ವೇದವತಿಯ ಪ್ರತಿಜ್ಞೆ, ಇವು ಇರದಿದ್ದರೆ ಸೀತೆಯ ಶೀಲರಕ್ಷಣೆ ಸಾಧ್ಯವಿತ್ತೆ? ಶಾಪ-ವರಗಳು ರಾಮಕಥೆಯಲ್ಲಿ ಇರದಿದ್ದರೆ ಈಗ ನಾವು ಕಾಣುತ್ತಿರುವ ರಾಮಾಯಣವು ಇರುತ್ತಿರಲಿಲ್ಲ. ಶಾಪ-ವರಗಳು ಕರ್ಮವಾದದ ಸಿದ್ಧಾಂತದಿಂದ ನಿರ್ಮಿತವಾಗಿರದೆ ಅವು ಜನಮಾನಸದ ಪ್ರವೃತ್ತಿಯಿಂದ, ಮಾನವನ ಸ್ವಭಾವ ಧರ್ಮವಿಶೇಷದಿಂದ ನಿರ್ಮಿತವಾಗಿವೆ. ಮಾನವೇತರ ಶಕ್ತಿಯಲ್ಲಿ ಆತನಿಗೆ ಶ್ರದ್ಧೆ
——————
೭೫. ಹಸ್ತಿನಾಪುರ.