ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೨೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ
೧೦೫
 

೧. ವಾಲ್ಮೀಕಿ < ನಿಷಾದ
ಬಾಲಕಾಂಡ/೨

ಒಮ್ಮೆ ವಾಲ್ಮೀಕಿ ಋಷಿಯು ಭರದ್ವಾಜನೆಂಬ ತನ್ನ ಶಿಷ್ಯನೊಡನೆ ತಮಸಾ ನದಿಯ ತೀರದ ವನದಲ್ಲಿ ಸ್ನಾನಸಂಧ್ಯಾವಂದನೆಗೆ ತಕ್ಕ ಸ್ಥಳವನ್ನು ಹುಡುಕುತ್ತಿದ್ದನು. ಆಗ ಯಾವ ಆಧಿವ್ಯಾಧಿಗಳ ಚಿಂತೆಯೂ ಇರದ ಕಾಮಕೇಳಿಯಲ್ಲಿ ತೊಡಗಿದ ಕ್ರೌಂಚಪಕ್ಷಿಗಳ ಒಂದು ಜೊತೆಯು ಕಾಣಿಸಿಕೊಂಡಿತು. ವಾಲ್ಮೀಕಿಯು ಇದನ್ನು ನೋಡುತ್ತಿದ್ದರೂ, ಅದನ್ನು ಲೆಕ್ಕಿಸದೇ ಪಾಪಬುದ್ಧಿಯ ನಿಷಾದನು, ನಿಷ್ಕಾರಣ ವೈರವನ್ನು ತಳೆದು ಆ ಜೊತೆಯಲ್ಲಿಯ ಗಂಡಿಗೆ ಗುರಿಯಿಟ್ಟನು. ಬಿಟ್ಟ ಬಾಣವು ಮರ್ಮಸ್ಥಳಕ್ಕೆ ತಗುಲಿ ಅದು ತಕ್ಷಣ ನೆಲಕ್ಕುರುಳಿತು; ದೇಹವೆಲ್ಲ ರಕ್ತರಂಜಿತವಾಗಿತ್ತು. ಪ್ರಾಣಾಂತಿಕ ವೇದನೆಯಿಂದ ಕಸಿವಿಸಿಗೊಳ್ಳುತ್ತಿದ್ದ ತನ್ನ ಪ್ರಿಯಕರನನ್ನು ಕಂಡು ಹೆಣ್ಣು ಕ್ರೌಂಚವು ಕರುಣಸ್ವರದಿಂದ ರೋದಿಸತೊಡಗಿತು. ತಲೆಯ ಮೇಲೆ ಆರಕ್ತವರ್ಣದ ತುರಾಯಿಯುಳ್ಳ ಕಾಮಪರವಶನಾದ, ಹಗಲಿರುವಳು ಜೊತೆಜೊತೆಯಾಗಿರುತ್ತಿದ್ದ ತನ್ನ ಪ್ರಿಯಕರನ ಆ ಅವಸ್ಥೆಯನ್ನು ಕಂಡು, ಆ ಹೆಣ್ಣು ಹಕ್ಕಿಯು ಬಲು ವ್ಯಾಕುಲಗೊಂಡಿತು. ಪ್ರಿಯಕರನ ಅಗಲುವಿಕೆಯು ಅಸಹನೀಯವಾಯಿತು. ಈ ದೃಶ್ಯವನ್ನು ಕಂಡ ವಾಲ್ಮೀಕಿಗೆ ಹೇಳಲಾಗದ ವ್ಯಥೆಯಾಯಿತು. ರೋದಿಸುತ್ತಿದ್ದ ಆ ಪಕ್ಷಿಣಿಯನ್ನು ಕಂಡಾಗ, ಈ ಪರಿ ಕಾಮಪರವಶವಾದ ಪಕ್ಷಿಯನ್ನು ವಧಿಸುವುದು 'ಅಧರ್ಮ'ವೆಂದೆನಿಸಿದ ವಾಲ್ಮೀಕಿಯ ಮುಖದಿಂದ ಈ ಉದ್ಗಾರವು ಹೊರಬಂದಿತು:

           ಮಾ ನಿಷಾದ ಪ್ರತಿಷ್ಠಾಂ ತ್ವಮಗಮ: ಶಾಶ್ವತೀಃ ಸಮಾಃ |
           ಯತ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್ ॥೧೫॥*

——————
*ಈ ಶ್ಲೋಕದ ವಿವಿಧ ಅನುವಾದಗಳಲ್ಲಿ ಸಾಕಷ್ಟು ಭಿನ್ನತೆಯು ಕಂಡುಬರುತ್ತದೆ:
(೧) ಪಂ. ಶ್ರೀ ದಾ. ಸಾತವಳೇಕರ ಇವರ ಅನುವಾದವು ಕೈ, ಕಾಶೀನಾಥಶಾಸ್ತಿ ಲೇಲೆ ಇವರು ಮಾಡಿದ ಅನುವಾದದಂತೆ ಇದೆ. ಅದರಲ್ಲಿ ಸ್ವಲ್ಪವೂ ವ್ಯತ್ಯಾಸವಿಲ್ಲ.
(೨) ಡಾ|| ಶ್ರೀನಿವಾಸ ಅಯ್ಯಂಗಾರ ಮತ್ತು ವಿದ್ವಾನ್ ಎಸ್. ರಂಗನಾಥಶರ್ಮ ಇವರು ಮಾಡಿದ ವಾಲ್ಮೀಕಿರಾಮಾಯಣದ ಕನ್ನಡದಲ್ಲಿಯ ಈ ಶ್ಲೋಕಾರ್ಥಗಳು ಕೈ. ಕಾಶೀನಾಥಶಾಸ್ತ್ರಿ ಲೇಲೆ ಇವರು ಮಾಡಿದ ಅನುವಾದದ ಅರ್ಥಕ್ಕೆ ಹೋಲುತ್ತವೆ.