ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೮

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಬೇಕುಬೇಕಾದ ರೂಪಗಳನ್ನು ಧರಿಸಬಲ್ಲ ಮಾರೀಚ ಮತ್ತು ಸುಬಾಹು ಎಂಬ ಇಬ್ಬರೂ ರಾಕ್ಷಸರು ನನ್ನ ಯಜ್ಞದಲ್ಲಿ ವಿಘ್ನಗಳನ್ನು ತಂದು ಅದನ್ನು ಪೂರ್ತಿಮಾಡ ಗೊಡುತ್ತಿಲ್ಲ. ನಾನು ಅನೇಕ ಸಲ ದೀಕ್ಷಾವ್ರತವನ್ನು ಮುಗಿಸುವ ಹಂತದಲ್ಲಿದ್ದಾಗ, ಈ ಇಬ್ಬರು ರಾಕ್ಷಸರು ರಕ್ತ-ಮಾಂಸಗಳನ್ನು ತಂದು ಯಜ್ಞ ವೇದಿಕೆಯಲ್ಲಿ ಚೆಲ್ಲುತ್ತಿದ್ದಾರೆ. ಈ ರೀತಿ ನನ್ನ ಯಜ್ಞದೀಕ್ಷೆಯು ಮತ್ತು ಯಜ್ಞವು ಹಾಳಾಗುತ್ತಿದೆ; ಕಾರಣ ನಾನು ಶಾಂತಚಿತ್ತ ವನ್ನಿಟ್ಟುಕೊಂಡು ಆ ಪ್ರದೇಶವನ್ನು ಬಿಟ್ಟುಹೋಗುತ್ತೇನೆ.”


          ನ ಚ ಮೇ ಕ್ರೋಧಮುತ್ಸ್ರಷ್ಟುಂ ಬುದ್ಧಿರ್ಭವತಿ ಪಾರ್ಥಿವ ‖೭‖
          ತಥಾಭೂತಾ ಹಿ ಸಾ ಚರ್ಯಾ ನ ಶಾಪಸ್ತತ್ರ ಮುಚ್ಯತೇ ‖೮‖


“ಹೇ ರಾಜನೇ! ಯಜ್ಞದೀಕ್ಷೆಯನ್ನು ವಹಿಸಿದ ಪುರುಷನು ಶಪಿಸಲು ಉದ್ಯುಕ್ತನಾಗುವದು ತರವಲ್ಲವಾದ್ದರಿಂದ ಶಾಪವನ್ನು ಕೊಟ್ಟು ರಾಕ್ಷಸರನ್ನು ನಾಶ ಮಾಡುವದು ನನ್ನಿಂದ ಆಗುತ್ತಿಲ್ಲ” ಎಂದು ಅಂದನು. ಅನಂತರ ವಿಶ್ವಾಮಿತ್ರನು ರಾಜನಿಗೆ, “ಆ ರಾಕ್ಷಸರನ್ನು ಸಂಹರಿಸಲು ನೀನು ನನ್ನ ಹಿರಿಯ ಮಗನಾದ ರಾಮನನ್ನು ನನಗೆ ಒಪ್ಪಿಸು; ರಾಕ್ಷಸರ ನಾಶ ಮಾಡಲು ಅವನೊಬ್ಬನೇ ಸಮರ್ಥನು; ನಾನು ರಾಮನನ್ನು ರಕ್ಷಿಸಿ ಆತನ ಶ್ರೇಯಸ್ಸನ್ನು ಬಯಸುವೆನು” ಎಂದು ಹೇಳಿದನು. ದಶರಥನು ಋಷಿಗೆ ಮಾತುಕೊಟ್ಟಿದ್ದರೂ, ವಿಶ್ವಾಮಿತ್ರನ ಕೇಳಿಕೆಯನ್ನು ಮನ್ನಿಸುವದು ಆತನಿಗೆ ಕಷ್ಟಕರವೆನಿಸಿತು. ರಾಜನು ಬಗೆಬಗೆಯ ನೆವಗಳನ್ನು ಮುಂದಿಟ್ಟನು. ಆಗ ವಿಶ್ವಾಮಿತ್ರನ ಕೋಪವು ಕೆರಳಿತು. ರಾಜನಿಗೆ ಸಮಾಧಾನ ಹೇಳಿ ರಾಮನನ್ನು ವಿಶ್ವಾಮಿತ್ರನೊಡನೆ ಕಳುಹಿಸಬೇಕೆಂಬ ಸಲಹೆಯನ್ನಿತ್ತನು.
ಶಾಪವನ್ನು ಕೊಟ್ಟು ರಾಕ್ಷಸರನ್ನು ನಾಶಗೊಳಿಸುವ ಸಾಮರ್ಥ್ಯವು ವಿಶ್ವಾಮಿತ್ರನಲ್ಲಿದ್ದರೂ, ಆತನು ವ್ರತಸ್ಥನಾಗಿದ್ದರೀಂದ ಶಪಿಸಲಿಲ್ಲ. ಶಾಪವನ್ನು ಕೊಡದ ಕಾರಣ ಅದರ ಸ್ವರೂಪವು ಸ್ಪಷ್ಟವಾಗಿಲ್ಲ.


೪. ಅಗಸ್ತ್ಯ < ಮಾರೀಚ

ಬಾಲಕಾಂಡ/೨೫

ವಿಶ್ವಾಮಿತ್ರನು ತಾಟಕಿಯ ವೃತ್ತಾಂತವನ್ನು ರಾಮನಿಗೆ ಹೇಳುತ್ತಿದ್ದಾನೆ.
ಅಗಸ್ತ್ಯ < ತಾಟಕಾ ಶಾಪ ಕ್ರ. ೬.
ಅಗಸ್ತ್ಯನು ಸುಂದರನನ್ನು ವಧಿಸಿದ ನಂತರ ಮಾರೀಚನು ಆತನ ಮೇಲೆ ಏರಿಹೋದನು.