ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೦

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಪುತ್ರನೊಡಗೂಡಿ ಋಷಿಯನ್ನು ನುಂಗಬೇಕೆಂದು ಆತನ ಮೇಲೆ ಏರಿಹೋದಳು. “ಮಾರೀಚನು ರಾಕ್ಷಸನಾಗಲಿ!” ಎಂದು ಅಗಸ್ತ್ಯನು ಶಾಪವನ್ನು ಕೊಟ್ಟನು. ತಾಟಕಿಯನ್ನು ಹೀಗೆ ಶಪಿಸಿದನು:


          ಪುರುಷಾದೀ ಮಹಾಯಕ್ಷೀ ವಿಕೃತಾ ವಿಕೃತಾನನಾ |
          ಇದಂ ರೂಪಂ ವಿಹಾಯಾಶು ದಾರುಣಂ ರೂಪಮಸ್ತು ತೇ ‖೧೩‖


“ಈ ನಿನ್ನ ರೂಪವು ಇಲ್ಲದಾಗಿ ನೀನು ಕೂಡಲೇ ಘೋರ ರೂಪವನ್ನು ತಾಳುವೆ; ಮಹಾಭಯಂಕರ ದೇಹ-ರೂಪವನ್ನು ಹೊಂದಿ, ಮಹಾಯಕ್ಷಿಣಿಯಾದ ನೀನು ಜನರನ್ನು ನುಂಗುವ ರಕ್ಕಸಿಯಾಗುವೆ” ಎಂದು ಶಪಿಸಿದನು.
ಈ ಶಾಪದಿಂದ ತಾಟಕಿಯ ಕೋಪ ಕೆರಳಿತು. ಕ್ರೋಧಾವಿಷ್ಟಳಾದ ಅವಳು ಅಗಸ್ತ್ಯ ಋಷಿಯ ಸಂಚಾರದ, ಪವಿತ್ರ ಪ್ರದೇಶವನ್ನು ಧ್ವಂಸಗೊಳಿಸಲಾರಂಭಿಸಿದಳು.

೭. ? < ತಾಟಕಾವನ

ಬಾಲಕಾಂಡ/೨೬

ವಿಶ್ವಾಮಿತ್ರನು ತಾಟಕಿಯ ವೃತ್ತಾಂತವನ್ನು ರಾಮನಿಗೆ ಹೇಳುತ್ತಿದ್ದಾನೆ:
ಅಗಸ್ತ್ಯನು ಶಪಿಸಿದ ನಂತರ ಆತನ ಸಂಚಾರದ ಪವಿತ್ರ ಪ್ರದೇಶವನ್ನು ತಾಟಕಿ ಧ್ವಂಸಗೊಳಿಸಹತ್ತಿದಳು. “ಇಮಥ ದುರಾಚಾರಿಣಿಯಾದ, ಅತಿಬಲಿಷ್ಠಳಾದ, ಬೇಕುಬೇಕಾದ ರೂಪವನ್ನು ತಾಳಬಲ್ಲ ಈ ಯಕ್ಷಿಣಿಯನ್ನು ವಧಿಸು” ಎಂದು ವಿಶ್ವಾಮಿತ್ರರು ರಾಮನಿಗೆ ಆಜ್ಞಾಪಿಸಿದನು. “ಶಾಪಗ್ರಸ್ತಳಾದ ಈ ತಾಟಕಿಯನ್ನು ವಧಿಸುವ ಸಾಮರ್ಥ್ಯ ನಿನ್ನ ಹೊರತು ಈ ಮೂರು ಲೋಕದಲ್ಲಿ ಮತ್ಯಾರಿಗೂ ಇಲ್ಲ; ಸ್ತ್ರೀವಧೆ ಹೇಗೆ ಮಾಡುವದೆಂದು ನಿನ್ನ ಮನಸ್ಸು ಕರಗುವದು ಬೇಡ! ನಾಲ್ಕು ವರ್ಣದವರ ಹಿತರಕ್ಷಣೆ ಮಾಡಬೇಕಾದದ್ದು - ಕೆಟ್ಟದಾಗಿರಲಿ, ಒಳ್ಳೆಯ ದಾಗಿರಲಿ, ಪಾಪದ ಕೆಲಸವಿರಲಿ, ಸಂತೋಷವಿರಲಿ- ಅದನ್ನು ರಾಜಪುತ್ರನಾದವನು ನೆರವೇರಿಸಲೇಬೇಕು! ರಾಜ್ಯಕಾರಭಾರವನ್ನು ಅಂಗೀಕರಿಸಿದವರಿಗೆ ಅದುವೇ ಸನಾತನಧರ್ಮ; ಕಾರಣ ಅಧರ್ಮನಿಷ್ಠೆಯಾದ ತಾಟಕಿಯನ್ನು ಸಂಹರಿಸು!” ಈ ರೀತಿ ಅಧರ್ಮವನ್ನಾಚರಿಸುವ ಸ್ತ್ರೀಯನ್ನು ವಧಿಸುವದು ಸೂಕ್ತವೆಂಬುದನ್ನು ರಾಮನಿಗೆ ಉದಾಹರಣೆಗಳನ್ನು ಕೊಟ್ಟು ವಿವರಿಸಿದನು. ಹಿಂದೆ ಇಂದ್ರನು, ವಿರೋಚನನೆಂಬ ರಾಕ್ಷಸನ ಕನ್ಯೆಯಾದ ಮಂಥರೆಯನ್ನು, ವಿಷ್ಣುವು, ಭೃಗುಪತ್ನಿ ಹಾಗೂ ಶುಕ್ರಮಾತೆಯರನ್ನು ವಧಿಸಿದ ಉದಾಹರಣೆಗಳನ್ನು ರಾಮನ ಮುಂದಿಟ್ಟನು.