ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೬

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ನಿರ್ಜನವಾಗಿ ಇರುವ ಕಾರಣವೇನು ಎಂದು ಪ್ರಶ್ನಿಸಿದನು. ವಿಶ್ವಾಮಿತ್ರನು ನುಡಿದದ್ದು:


           ಹಂತ ತೇ ಕಥಯಿಷ್ಯಾಮಿ ಶೃಣು ತತ್ತ್ವೇನ ರಾಘವ |
           ಯಸ್ಯೈತದಾಶ್ರಮಪದಂ ಶಪ್ತಂ ಕೋಪಾನ್ಯಹಾತ್ಮನಃ ॥೧೪॥


“ರಾಮನೇ! ಯಾವ ಮಹಾತ್ಮನ ಕೋಪದ ಫಲವಾಗಿ ಈ ಆಶ್ರಮವು ಶಾಪಕ್ಕೆ ಒಳಗಾಗಿದೆಯೋ ಅದನ್ನು ನಿನಗೆ ಹೇಳುವೆ! ಕೇಳು!” ಎಂದು ಪ್ರಸ್ತಾಪಿಸಿ, ವಿಶ್ವಾಮಿತ್ರನು ಮುಂದುವರಿದನು.
ಸ್ವರ್ಗಲೋಕದ ಆಶ್ರಮದಂತಿರುವ ಈ ಆಶ್ರಮವು ಗೌತಮ ಋಷಿಯದು. ಆತನು ತನ್ನ ಪತ್ನಿಯಾದ ಅಹಲ್ಯೆಯೊಡನೆ ಬಹುವರುಷಗಳ ಕಾಲ ತಪಸ್ಸನ್ನು ಮಾಡುತ್ತಿದ್ದನ್ನು ಋಷಿಯು ಆಶ್ರಮದಲ್ಲಿ ಇಲ್ಲದಿರುವ ಸಮಯವನ್ನು ಸಾಧಿಸಿ ಇಂದ್ರನು ಗೌತಮನ ವೇಷದಿಂದ ಬಂದು ಅಹಲ್ಯೆಗೆ ಈ ರೀತಿ ಎಂದನು:


           ಋತುಕಾಲಂ ಪ್ರತೀಕಷತೇ ನಾಥಿನಂ ಸುಸಮಾಹಿತೇ |
           ಸಂಗಮಂ ತ್ವಹಮಿಚ್ಛಾಮಿ ತ್ವಯಾ ಸಹ ಸುವಧ್ಯುಮೇ ‖೧೮‖
           ಮುನಿವೇಷಂ ಸಹಸ್ರಾಕ್ಷಂ ವಿಜ್ಞಾಯ ರಘುನಂದನ |
           ಮತಿಂ ಚಕಾರ ದುರ್ಮೇಧಾ ದೇವರಾಜ-ಕುತೂಹಲಾತ್ ‖೧೯‖
           ಅಥಾಬ್ರವೀತ್ಸುರಶ್ರೇಷ್ಠಂ ಕೃತಾರ್ಥೇನಾಂತರಾತ್ಮನಾ |
           ಕೃತಾರ್ಥಾಸ್ಮಿ ಸುರಶ್ರೇಷ್ಠ ಗಚ್ಛ ಶೀಘ್ರಮಿತಃ ಪ್ರಭೋ ‖೨೦‖
           ಆತ್ಮಾನಂ ಮಾಂ ಚ ದೇವೇಶ ಸರ್ವಥಾ ರಕ್ಷ ಗೌತಮಾತ್ |
           ಇಂದ್ರಸ್ತು ಪ್ರಹಸನ್ವಾಕ್ಯಮಹಲ್ಯಾಮಿದಮಬ್ರವೀತ್ ‖೨೧‖
           ಸುಶ್ರೋಣಿ ಪರಿತುಷ್ಟೋsಸ್ಮಿ ಗಮಿಷ್ಯಾಮಿ ಯಥಾಗತಮ್ ‖೨೨‖


“ಎಲೈ ಪರಮಸುಂದರಿ, ಕೃಶೋದರಿ, ರತಿಸುಖಲಾಲಸೆಯಿದ್ದವರಿಗೆ ಋತು ಕಾಲಗಳ ಪರಿವೆ ಇರುವದಿಲ್ಲ. ನಾನು ನಿನ್ನೊಡನೆ ಸಮಾಗಮವನ್ನು ಬಯಸುತ್ತೇನೆ.” ಗೌತಮವೇಷವನ್ನು ಧರಿಸಿದ ಈತನು ಇಂದ್ರನೆಂದು ತಿಳಿದುಬಂದರೂ ದೇವರಾಜ ಇಂದ್ರನು ತನ್ನಲ್ಲಿ ಅಭಿಲಾಷೆಯಿಟ್ಟುಕೊಂಡಿದ್ದಾನೆಂಬ ಹೆಮ್ಮೆಯಿಂದ ದುರ್ಮತಿಯಾದ ಅವಳು ಇಂದ್ರನೊಡನೆ ರತಿಕ್ರೀಡೆಯಲ್ಲಿ ನಿರತಳಾಗಲು ಅಣಿಯಾದಳು. ಸಮಾಗಮವಾದೊಡನೆ ತೃಪ್ತಿಗೊಂಡ ಅವಳು ಇಂದ್ರನನ್ನು ಕುರಿತು “ಎಲೈ ಸುರಶ್ರೇಷ್ಠನೆ, ನಾನು ಕೃತಾರ್ಥಳಾದೆ; ಈಗ ನೀನು ಇಲ್ಲಿಂದ ಬೇಗ ಹೊರಡು!