ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪವಾಣಿ

೧೨೫


ನನ್ನನ್ನು ದೂಷಿಸಿದ್ದಾನೆ; ಆದ್ದರಿಂದ ಅವನು ಲೋಕದಲ್ಲೆಲ್ಲ ದೂಷಿತ ನೆನಿಸಿ, ಬೇಡನ ಜನ್ಮವನ್ನು ಹೊಂದಲಿ! ಕ್ರೂರಿಯಾದ ಅವನು ಪ್ರಾಣಿಗಳ ಪ್ರಾಣಗಳನ್ನು ಅಪಹರಿಸಲು ಪ್ರವೃತ್ತನಾಗಲಿ! ನನ್ನ ಕ್ರೋಧದಿಂದ ಆತನು ಬಹುಕಾಲಪರ್ಯಂತ ದುಃಸ್ಥಿತಿಯಲ್ಲಿಯೇ ಉಳಿಯಲಿ!” ಎಂದು ವಿಶ್ವಾಮಿತ್ರನು ಉದ್ಗರಿಸಿದನು.

೧೬. ವಿಶ್ವಾಮಿತ್ರ < ತ್ರಿಶಂಕುವಿನ ಯಜ್ಞಕ್ಕೆಂದು ಆಮಂತ್ರಿತ ಋಷಿಗಳು

ಬಾಲಕಾಂಡ/೬೦

ತ್ರಿಶಂಕುವಿಗಾಗಿ ವಿಶ್ವಾಮಿತ್ರನು ಕೈಕೊಂಡ ಯಜ್ಞರ ವೃತ್ತಾಂತವನ್ನು ಶತಾನಂದನು ರಾಮನಿಗೆ ವಿವರಿಸುತ್ತಾನೆ:
ವಸಿಷ್ಠ ಪುತ್ರರನ್ನು ಶಪಿಸಿದ ನಂತರ ಅವರು ನಾಶಗೊಂಡರೆಂದು ಬಗೆದು, ತ್ರಿಶಂಕುವಿಗೆ ದೇಹಸಹಿತ ಸ್ವರ್ಗಪ್ರಾಪ್ತಿಯಾಗಬೇಕೆಂದು ಯಜ್ಞವನ್ನು ಆರಂಭಿಸಲು ಆಗಮಿಸಿದ ಋಷಿಗಳಿಗೆ ವಿಶ್ವಾಮಿತ್ರನು ಹೇಳಿದನು. ಅವನ ಹೇಳಿಕೆಯನ್ನು ಕೇಳಿ ಧರ್ಮಜ್ಞರಾದ ಋಷಿಗಳೆಲ್ಲರೂ ಒಟ್ಟಾಗಿ ತಮ್ಮತಮ್ಮಲ್ಲಿ ಮಾತನಾಡ ಹತ್ತಿದರು: “ಈ ಕೌಶಿಕವಂಶಜ ಮುನಿಯು ಬಲು ಕೋಪದಲ್ಲಿದ್ದಾನೆ; ಕಾರಣ ಈತನ ಮಾತನ್ನು ನಾವು ಯಥಾಯೋಗ್ಯವಾಗಿ ನೆರವೇರಿಸಬೇಕು. ನಾವು ಹಾಗೆ ಮಾಡದಿದ್ದರೆ,


           ಅಗ್ನಿಕಲ್ಪೋ ಹಿ ಭವಾನ್ ಶಾಪಂ ದಾಸ್ಯತಿ ರೋಷತಃ ‖೬‖


“ಅಗ್ನಿಸಮನಾದ ಭಗವಾನ್ ವಿಶ್ವಾಮಿತ್ರನು ಕೋಪಗೊಂಡು ಶಪಿಸುವನು.” ವಿಶ್ವಾಮಿತ್ರನ ತೇಜಸ್ಸಿನಿಂದ ತ್ರಿಶಂಕುವು ದೇಹಸಹಿತವಾಗಿ ಸ್ವರ್ಗವನ್ನು ಸೇರುವನು; ಆದ್ದರಿಂದ ಯಜ್ಞವನ್ನು ಪ್ರಾರಂಭಿಸುವುದು ಉಚಿತವೆಂದು ಭಾವಿಸಿ ಅವರು ಯಜ್ಞವನ್ನಾರಂಭಿಸಿದರು.
ಇಲ್ಲಿ ಶಾಪವನ್ನು ಪ್ರತ್ಯಕ್ಷವಾಗಿ ಕೊಟ್ಟಿಲ್ಲ. ವಿಶ್ವಾಮಿತ್ರನ ಆಜ್ಞೆಯಂತೆ ನಡೆದು ಕೊಳ್ಳದಿದ್ದರೆ ಆತನು ಶಪಿಸಬಹುದೆಂಬ ಭೀತಿಯನ್ನು ವ್ಯಕ್ತಮಾಡಲಾಗಿದೆ; ಹೀಗಾಗಿ ಶಾಪದ ಸ್ವರೂಪವು ಸ್ಪಷ್ಟವಾಗಿಲ್ಲ.
ಈ ಶಾಪವು ಕಟ್ಟಳೆಯದಾಗಬಹುದಿತ್ತು.