ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

xvi

ಋಣಂ ಕೃತ್ವಾ..

ದೊರೆಯುವದರಿಂದ, ಸಾಧ್ಯವಾದಷ್ಟು, ಋಣವನ್ನು ಪಡೆಯುತ್ತಿರುವುದನ್ನು ನಾನು ಬಯಸುತ್ತೇನೆ. ಮಾತೃಋಣ, ಆಚಾರ್ಯಋಣ ಇವುಗಳಷ್ಟೇ ಗ್ರಂಥಋಣ ಮತ್ತು ಮಿತ್ರಋಣಗಳೂ ಮಹತ್ವದ್ದಾಗಿವೆ, ಆಕರ್ಷಕವೂ ಆಗಿವೆ. ನಾನು ಯಾರ ಮುಂದೆ ಕೈ ಒಡ್ಡಿದೆನೋ ಅವರೆಲ್ಲರೂ ತಡ ಮಾಡದೆ, ಪ್ರಸನ್ನಚಿತ್ತದಿಂದ ಮುಕ್ತ ಹಸ್ತಗಳಿಂದ ಕೈತುಂಬಿ ಕೊಟ್ಟರು. ಯಾರೂ ಇಲ್ಲವೆನ್ನಲಿಲ್ಲ; ತಾತ್ಸಾರ ಮಾಡಲಿಲ್ಲ. ಬರಿಗೈಯಿಂದ ಎಂದೂ ನಾನು ಮರಳಲಿಲ್ಲ. ಕೆಲವು ಋಣಗಳನ್ನು ತೀರಿಸುವ ಇಚ್ಛೆಯೇ ಇರುವದಿಲ್ಲವಾದರೆ ಕೆಲವು ಋಣಗಳನ್ನು ತೀರಿಸುವುದು ಸಾಧ್ಯವಿರುವದಿಲ್ಲ. ಈ ರೀತಿ ತೀರಿಸಲು ಅಸಾಧ್ಯ ಋಣಗಳೆಂದರೆ ಗ್ರಂಥಋಣ ಮತ್ತು ಮಿತ್ರ ಋಣಗಳಾಗಿವೆ. ಇನ್ನೊಂದು ಗಮನಾರ್ಹ ಸಂಗತಿ ಎಂದರೆ ಈ ಋಣಕ್ಕೆ ಬಡ್ಡಿಯ ಆಕರಣೆಯಾಗುವುದಿಲ್ಲ; ಅಂದಬಳಿಕ ಚಿಂತೆಯಾದರೂ ಏಕಿರಬೇಕು?
ಈ ಗ್ರಂಥವನ್ನು ಬರೆಯುತ್ತಿರುವಾಗ, ನಿರ್ಮಿತಿಯಲ್ಲಿ, ಅನೇಕರಿಂದ ಅನೇಕ ರೀತಿಯಲ್ಲಿ ನೆರವನ್ನು ಬೇಡಿಕೊಂಡೆ; ಲೇಖನ. ಮುದ್ರಣ, ಪ್ರಕಾಶನ- ಈ ಮೂರು ಹಂತಗಳಲ್ಲಿ ನಾನು ಸಹಾಯ ಪಡೆದವರ ಹೆಸರುಗಳನ್ನು ಎಷ್ಟೇ ಕೂಲಂಕಷವಾಗಿ ಜ್ಞಾಪಕದಲ್ಲಿಟ್ಟುಕೊಳ್ಳಬೇಕೆಂದರೂ ಆ ಪಟ್ಟಿ ಸಂಪೂರ್ಣ, ಪರಿಪೂರ್ಣವಾಗುವುದು ಸಾಧ್ಯವಿಲ್ಲ. ಅಜಾಗರೂಕತೆಯಿಂದಾಗಲೀ, ವಿಸ್ತರಣೆಯಿಂದಾಗಲೀ ಯಾರೊಬ್ಬರ ನಾಮನಿರ್ದೇಶನ ಉಳಿದುಹೋದರೆ, ಆ ವ್ಯಕ್ತಿಗೆ ಇಲ್ಲವೇ ಸಂಸ್ಥೆಗೆ ಅನ್ಯಾಯ ಬಗೆದಂತಾಗಿ ಅದು ಕೃತಜ್ಞತೆ ಎಂದೆನಿಸಬಹುದು. ಈ ಕಾರಣದಿಂದಲೇ ಈ ಸೂಕ್ತ ಹೆಸರುಗಳ ಪಟ್ಟಿಯನ್ನು ನಾನು ಕೊಟ್ಟಿಲ್ಲ. ಅದಕ್ಕಾಗಿ ಕ್ಷಮಿಸಬೇಕು. ಅಂಥ ವ್ಯಕ್ತಿಗಳೂ, ಸಂಸ್ಥೆಗಳು ಮಾಡಿದ ಉಪಕಾರದ ಹೊಣೆಯನ್ನು ಹೊತ್ತುಕೊಂಡು ಅವರೆಲ್ಲರಿಗೂ ಕೃತಜ್ಞತೆಯಿಂದ ಕೈಮುಗಿಯುವುದೇ ನನಗೆ ಸರಿ ಎನಿಸುತ್ತದೆ.
ಮರಾಠಿ ಸಾಹಿತ್ಯದಲ್ಲಿಯೂ ಹೆಸರಿಲ್ಲದ, ಸ್ಥಾನವಿಲ್ಲದ ನನ್ನಂತಹನ ಮರಾಠಿ ಪುಸ್ತಕವನ್ನು ಕನ್ನಡಿಸಿದ ಸೌ॥ ಸರಸ್ವತಿ ರಿಸಬೂಡ ಅವರು ಕೇಳಿದೊಡನೆ ಒಪ್ಪಿಕೊಂಡದ್ದು ನನ್ನ ಭಾಗ್ಯ. ಡಾ॥ ಇರಾವತಿ ಕರ್ವೆ ಅವರ 'ಯುಗಾಂತ'ವನ್ನು ಕನ್ನಡಿಸಿ ತಮ್ಮ ಅನುವಾದ ಕೌಶಲವನ್ನು ಸಿದ್ಧಪಡಿಸಿದ್ದಾರೆ. ಮಾನ್ಯತೆಯನ್ನು ಹೊಂದಿದ್ದಾರೆ. ಅತ್ಯಂತ ಅಲ್ಪಕಾಲದಲ್ಲಿ ನನ್ನ ಈ ಪುಸ್ತಕದ ಸರಸ, ಸುರಸ ಅನುವಾದವನ್ನು ಸಿದ್ಧಪಡಿಸಿದ್ದಾರೆ.