ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶಾಪವಾಣಿ

೧೨೭


ಮನೋವಾಂಛಿತವನ್ನು ನೆರವೇರಿಸಿರಿ! ಸತ್ಕರ್ಮನಿರತರಾದ ನೀವು ಧರ್ಮನಿಷ್ಠರಾಗಿದ್ದೀರಿ; ನೀವು ಯಜ್ಞಬಲಿಪಶುವಾಗಿ ಅಂಬರೀಷನ ಯಜ್ಞಾಗ್ನಿಯನ್ನು ತೃಪ್ತಿಗೊಳಿಸಿರಿ; ಆಗ ದೇವತೆಗಳು ಪ್ರಸನ್ನರಾಗುವರು; ಯಜ್ಞವು ನಿರ್ವಿಘ್ನವಾಗಿ ನೆರವೇರಿ ಶುನಃಶೇಪನು ಸನಾಥನಾಗುವನು." ಈ ಬಗೆಯ ವಿಶ್ವಾಮಿತ್ರನ ಮಾತುಗಳನ್ನು ಕೇಳಿ ಮಧುಚ್ಛಂದಾದಿ ಆತನ ಪುತ್ರರು ನಗುನಗುತ್ತ ಈ ರೀತಿ ನುಡಿದರು:
"ಹೇ ಪ್ರಭೋ! ನೀನು ನಿನ್ನ ಪುತ್ರನನ್ನು ಬಲಿಕೊಟ್ಟು ಇನ್ನೊಬ್ಬರ ಪುತ್ರನನ್ನು ರಕ್ಷಿಸುವುದೇಕೆ? ನಿನ್ನ ಈ ಕೃತ್ಯವು ಊಟದಲ್ಲಿ ನಾಯಿಯ ಮಾಂಸವನ್ನು ಸ್ವೀಕರಿಸಿದಷ್ಟು ಅಯೋಗ್ಯವಾಗಿದೆ!"
ಈ ರೀತಿ, ತನ್ನ ಆಜ್ಞೆಯನ್ನು ಉಲ್ಲಂಘಿಸುವ, ತನ್ನ ಪುತ್ರರ ನುಡಿಗಳನ್ನು ಕೇಳಿ ವಿಶ್ವಾಮಿತ್ರನು ಕ್ರೋಧಾವಿಷ್ಟನಾಗಿ ಈ ರೀತಿ ನುಡಿದನು:

           ನಿಃಸಾಧ್ವಸಮಿದಂ ಪ್ರೋಕ್ತಂ ಧರ್ಮಾದಪಿ ವಿಗರ್ಹಿತಮ್ |
           ಅತಿಕ್ರಮ್ಯ ತು ಮದ್ವಾಕ್ಯಂ ದಾರುಣಂ ರೋಮಹರ್ಷಣಮ್ ‖೧೬‖
           ಶ್ವಮಾಂಸಭೋಜಿನಃ ಸರ್ವೇ ವಾಸಿಷ್ಠಾ ಇವ ಜಾತಿಷು |
           ಪೂರ್ಣವರ್ಷಸಹಸ್ರಂ ತು ಪೃಥಿವ್ಯಾಮನುವತ್ಸ್ಯಥ ‖೧೭‖


“ನನ್ನ ಆಜ್ಞೆಯನ್ನು ಮೀರಿ, ಮೈನಡುಕಬರುವಂಥ ಭಾಷಣವನ್ನು ನೀವು ನನ್ನ ಭಯವಿಲ್ಲದೇ ಮಾಡಿದ್ದೀರಿ; ಧರ್ಮದೃಷ್ಟಿಯಿಂದಲೂ ನಿಮ್ಮ ಭಾಷಣವು ಹೇಯವಾದಷ್ಟು; ಈ ಕಾರಣದಿಂದ ನೀವೆಲ್ಲರೂ ನಾಯಿಯ ಮಾಂಸವನ್ನು ತಿಂದುಕೊಂಡು ಮುಷ್ಟಿಕ ಜಾತಿಯವರಾಗಿ ಬಾಳುವಿರಿ! ವಸಿಷ್ಠ ಪುತ್ರರಂತೆ ಒಂದು ಸಾವಿರ ವರ್ಷಗಳ ಪರ್ಯಂತ ಭೂಲೋಕದಲ್ಲಿ ವಾಸವಾಗಿರುವಿರಿ!”

೧೮. ವಿಶ್ವಾಮಿತ್ರ < ರಂಭೆ

ಬಾಲಕಾಂಡ/೬೪

ವಿಶ್ವಾಮಿತ್ರನ ಸಾಮರ್ಥ್ಯ, ತಪೋನಿಷ್ಠೆ ಎಷ್ಟೊಂದು ಪ್ರಖರವಿತ್ತೆಂಬುದನ್ನು ಶತಾನಂದನು ರಾಮನಿಗೆ ತಿಳಿಸುತ್ತಾನೆ:
'ಬ್ರಹ್ಮರ್ಷಿ' ಎಂದೆನಿಸಿಕೊಳ್ಳುವ ಉತ್ಕಟ ಇಚ್ಛೆಯಿಂದ ವಿಶ್ವಾಮಿತ್ರನು ಉಗ್ರ ತಪಸ್ಸನ್ನು ಕೈಕೊಂಡನು. ಆಗ ಇಂದ್ರಾದಿ ದೇವತೆಗಳು ತೊಂದರೆ-ತಾಪಗಳಿಗೆ