ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶಾಪವಾಣಿ

೧೩೧


"ಎಲೈ ಕೈಕೇಯಿ, ನೀನು ನನ್ನನ್ನು ಸ್ಪರ್ಶಿಸಬೇಡ; ಎಲೈ ಪಾಪನಿಶ್ಚಯಿ! ನಿನ್ನ ಮುಖಾವಲೋಕನವು ನನಗೆ ಇಷ್ಟವಿಲ್ಲ. ನೀನು ನನ್ನ ಹೆಂಡತಿಯಲ್ಲ; ಯಾವ ಆಪ್ತ ಸಂಬಂಧಿಕಳೂ ಅಲ್ಲ. ನಿನ್ನನ್ನು ಆಶ್ರಯಿಸಿರುವವರೊಡನೆ ನನಗೆ ಯಾವ ಸಂಬಂಧವೂ ಇಲ್ಲ. ಧರ್ಮವನ್ನು ತ್ಯಜಿಸಿ ಕೇವಲ ಸ್ವಾರ್ಥವನ್ನು ಸಾಧಿಸುವ ನಿನ್ನನ್ನು ನಾನು ತ್ಯಜಿಸಿದ್ದೇನೆ. ನಿನ್ನ ಪಾಣಿಗ್ರಹಣ, ನಿನ್ನಿಂದ ಅಗ್ನಿಗೆ ಹಾಕಿಸಿದ ಪ್ರದಕ್ಷಿಣೆ ಇವುಗಳಿಗೆ ಇಹ-ಪರದಲ್ಲಿ ಇನ್ನು ಮುಂದೆ ಯಾವ ಅರ್ಥವೂ ಉಳಿಯಲಿಲ್ಲ. ಈ ಅಕ್ಷಯರಾಜ್ಯವನ್ನು ಪಡೆದು ಭರತನು ಸಂತೋಷಗೊಂಡು, ಪಿತನೆಂದು ನನಗಾಗಿ ಆಚರಿಸುವ ಆತನ ಶ್ರಾದ್ಧಾದಿಗಳು ನನಗೆ ತಲುಪದಿರಲಿ!"
ದಶರಥನ ಈ ಉದ್ಗಾರಗಳನ್ನು ವಾಲ್ಮೀಕಿಯು ಶಾಪವೆಂದೆಣಿಸಿಲ್ಲ; ಆದರೆ ಅವು ಶಾಪದ ನುಡಿಗಳೇ ಆಗಿವೆ. ಸ್ವರ್ಗಸ್ಥನಾದ ದಶರಥರಾಜನು ಮಹಾದೇವನ ಅಪ್ಪಣೆಯ ಅನುಸಾರ ವಿಮಾನದಿಂದ ರಾಮಲಕ್ಷ್ಮಣರ ಭೇಟಿಗೆಂದು ಬಂದಾಗ, ರಾಮನು ದಶರಥನಿಗೆ ವಿನಂತಿಸಿದ್ದಾನೆ; ಅದರಲ್ಲಿ ಈ ಉದ್ಗಾರಗಳಿಗೆ 'ಶಾಪ'ವೆಂಬ ಶಬ್ದವನ್ನು ಬಳಸಲಾಗಿದೆ.

ಯುದ್ಧಕಾಂತ/೧೧೯


           ಕುರು ಪ್ರಸಾದಂ ಧರ್ಮಜ್ಞ ಕೈಕೇಯ್ಯಾ ಭರತಸ್ಯ ಚ ‖೨೫‖
           ಸಪುತ್ರಾಂ ತ್ವಾಂ ತ್ಯಜಾಮೀತಿ ಯದುಕ್ತಾ ಕೈಕಯೇಂ ತ್ವಯಾ |
           ಸ ಶಾಪಃ ಕೈಕೇಯೀಂ ಘೋರಃ ಸಪುತ್ರಾಂ ಸ್ಪೃಶೇತ್ಪ್ರಭೋ ‖೨೬‖


“ಎಲೈ ದರ್ಮಜ್ಞರೇ! ಕೈಕೇಯಿಗೆ ಮತ್ತು ಭರತನಿಗೆ ಕೃಪೆ ಮಾಡಿರಿ! ಪುತ್ರ ಸಮೇತ ನಾನು ನಿನ್ನನ್ನು ತ್ಯಜಿಸುತ್ತೇನೆ ಎಂದು ಕೈಕೇಯಿಗೆ ಹೇಳಿದಿರಿ; ಈ ಘೋರಶಾಪವು ಕೈಕೇಯಿಗೆ ಅಥವಾ ಆಕೆಯ ಪುತ್ರನಾದ ಭರತನಿಗೆ ತಾಗದಿರಲಿ!”
ರಾಮನ ಈ ಮೇಲಿನ ಬಿನ್ನಪವನ್ನು ದಶರಥನು ಮನ್ನಿಸಿದನು.
ಇದು ಕಟ್ಟಳೆಯ ಶಪವಿದೆ.

೨೧. ಶ್ರಾವಣ < ದಶರಥ

ಅಯೋಧ್ಯಾಕಾಂಡ/೬೩

ರಾಮನು ವನವಾಸಕ್ಕೆ ಹೋಗಲಿರುವೆನೆಂದು ಶೋಕಾಕುಲನಾಗಿದ್ದ ದಶರಥನು ಕೈಕೇಯಿಗೆ ತನ್ನ ಪೂರ್ವಚರಿತ್ರೆಯಲ್ಲಿಯ ಒಂದು ಪ್ರಸಂಗವನ್ನು ಹೇಳುತ್ತಾನೆ: