ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೩೨

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ವೃದ್ಧರಾದ, ಅಂಧರಾಗಿದ್ದ ತಂದೆತಾಯಿಗಳಿಗಾಗಿ ಜಲಾಶಯದಿಂದ ನೀರನ್ನು ತರಲು ಕೊಡವನ್ನು ತೆಗೆದುಕೊಂಡು ಶ್ರಾವಣನು ಹೋಗಿದ್ದನು. ಅಲ್ಲಿ ದಶರಥ ರಾಜನು ಬೇಟೆಯಾಡಲು ಕಾಡಿಗೆ ಬಂದಿದ್ದನು. ದಶರಥನು ಬಿಟ್ಟ ಬಾಣವು ಶ್ರಾವಣನ ಮರ್ಮ ಸ್ಥಾನಕ್ಕೆ ತಗುಲಿ ಅವನು ಗಾಯಗೊಂಡನು. ಶ್ರಾವಣನ ವಿಲಾಪವನ್ನು ಕೇಳಿದೊಡನೆ ದಶರಥನಿಗೆ ತನ್ನಿಂದ ನಡೆದ ತಪ್ಪಿನ ಅರಿವಾಯಿತು. ಆ ವಿಲಾಪದ ಧ್ವನಿಯನ್ನು ಸಮೀಪಿಸಿದಾಗ, ಗಾಯಗೊಂಡ ಶ್ರಾವಣನು ಮರಣಣೋನ್ಮುಖವಾಗಿ ಕಸಿವಿಸಿಪಡುತ್ತಿದ್ದುದನ್ನು ದಶರಥನು ಕಂಡನು. ಅಂಥ ಅವಸ್ಥೆಯಲ್ಲಿದ್ದ ಶ್ರಾವಣನು ದಶರಥನಿಗೆ ಬಿನ್ನೈಸಿ ಇಂತೆಂದನು: “ನಾನು ನೀರು ತೆಗೆದುಕೊಂಡು ಹೋಗಲು ತುಂಬಾ ಸಮಯವಾದ್ದರಿಂದ ನನ್ನ ತಾಯಿ-ತಂದೆಯರು ಬಹಳ ಚಿಂತಾತುರರಾಗಿರಬಹುದೆಂಬ ಭಯವು ನನಗಿದೆ: ಕಾರಣ ರಾಜನೇ, ನೀನು ಬೇಗ ಹೋಗಿ ನೀರನ್ನು ಕೊಡು; ನಡೆದ ಸಮಾಚಾರವನ್ನು ಅವರಿಗೆ ತಿಳಿಸು!” ಎಂದು ಹೇಳಿದನು. ಹರಡುವ ಅಗ್ನಿ ಜ್ವಾಲೆಯು ಯಾವ ರೀತಿ ಅಡವಿಯನ್ನೆಲ್ಲ ಸುಟ್ಟುಹಾಕುತ್ತದೆಯೋ ಅದೇ ರೀತಿ ನನ್ನ ತಂದೆಯು ಕ್ರೋಧಗೊಂಡು ನಿನ್ನನ್ನು ದಹಿಸದಿರಲಿ! ಎಂಬ ಸದಿಚ್ಛೆಯನ್ನು ಸಹ ಶ್ರಾವಣನು ದಶರಥನ ಮುಂದೆ ಪ್ರಕಟಿಸಿದನು. ತನ್ನ ತಂದೆಯಿದ್ದ ಆಶ್ರಮದ ಕಾಲುದಾರಿಯನ್ನು ದಶರಥನಿಗೆ ಕೈಮಾಡಿ ತೋರಿಸಿ ಈ ರೀತಿ ಅಂದನು:


           ತಂ ಪ್ರಸಾದಯ ತ್ವಂ ನ ತ್ವಾ ಸಂಕುಪಿತಃ ಶಪೇತ್ ‖೪೫‖


"ನನ್ನ ತಂದೆಯು ಸಿಟ್ಟಾಗಿ ಶಾಪವನ್ನು ಕೊಡದಂತೆ ನೀನು ಹೋಗಿ ಉಪಚರಿಸು!" ಶ್ರಾವಣನ ಈ ಮಾತನ್ನು ಕೇಳಿ, ಆತನ ಹೇಳಿಕೆಯಂತೆ ಆತನ ಶರೀರದಲ್ಲಿ ನೆಟ್ಟ ಬಾಣವನ್ನು ಹೊರಕ್ಕೆಳೆದ ನಂತರ ತುಸು ಸಮಯದಲ್ಲಿ ಶ್ರಾವಣನು ಅಸುನೀಗಿದನು.
ನಿಜದಲ್ಲಿ ಶಾಪ ಇನ್ನೂ ನುಡಿದಿರಲಿಲ್ಲ; ಆದರೆ ಶಾಪ ಕೊಡಬಹುದೆಂಬ ಭಯವನ್ನು ವ್ಯಕ್ತಮಾಡಲಾಗಿದೆ. ಹೀಗಿರುವುದರಿಂದ ಶಾಪದ ಸ್ವರೂಪವು ಸ್ಪಷ್ಟವಿಲ್ಲ.
ಇದು ಕಟ್ಟಳೆಯ ಶಾಪವಾಗಿದೆ.