ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪವಾಣಿ

೧೩೩


೨೨. (ಶ್ರಾವಣನ ತಂದೆ) ಶ್ರವಣ<ದಶರಥ

ಅಯೋಧ್ಯಾಕಾಂಡ/೬೪

ರಾಮನು ವನವಾಸಕ್ಕೆ ತೆರಳಲಿರುವನೆಂದು ಶೋಕಾರ್ತನಾದ ದಶರಥನು ತನ್ನ ಜೀವನದಲ್ಲಿ ನಡೆದ ಒಂದು ಘಟನೆಯನ್ನು ಕೈಕೇಯಿಗೆ ಹೇಳುತ್ತಾನೆ:
ಶ್ರಾವಣನಿಗೆ ಬಾಣವು ತಗುಲಿದ ನಂತರ ಆತನ ಹೇಳಿಕೆಯಂತೆ ದಶರಥನು ಶ್ರಾವಣನ ತಂದೆಯ ಆಶ್ರಮಕ್ಕೆ ಹೋದನು. ಅತ್ಯಂತ ಶೋಕಾಕುಲನಾಗಿ ಆತನು ನಡೆದುದೆಲ್ಲವನ್ನು ಯಥಾಸಾಂಗವಾಗಿ ಹೇಳಿದನು. ಏಕೈಕ ಮಗನ ಮರಣದ ದುರ್ವಾರ್ತೆಯನ್ನು ಕೇಳಿ ಶ್ರಾವಣನ ತಂದೆತಾಯಿಯರಿಗೆ ತಾಳಲಾರದಷ್ಟು ವ್ಯಥೆಯಾಯಿತು. ಶೋಕವಿಹ್ವಲನಾದ ಆ ಮಹಾತೇಜಸ್ವಿ, ಶ್ರಾವಣನ ಪಿತನು ದಶರಥ ರಾಜನಿಗೆ ಈ ರೀತಿ ನುಡಿದನು: “ಎಲೈ ರಾಜನೇ, ಈ ಅಶುಭಕೃತ್ಯವನ್ನು ನಿನ್ನ ಬಾಯಿಂದ ಸ್ವತಃ ನನ್ನ ಮುಂದೆ ಹೇಳಿರದಿದ್ದರೆ, ನಿನ್ನ ತಲೆಯು ಸಿಡಿದು ಸಹಸ್ರ ಹೋಳಾಗುತ್ತಿತ್ತು. ರಾಜನೇ, ಯಾವ ಕ್ಷತ್ರಿಯನು ಬುದ್ದ್ಯಾಪೂರ್ವಕವಾಗಿ, ವಾನ ಪ್ರಸ್ಥಾಶ್ರಮಧರ್ಮದ ಪಾಲನೆಯಲ್ಲಿದ್ದವನನ್ನು ವಧಿಸುವನೋ ಅಂಥವನು ಇಂದ್ರನೇ ಆಗಿದ್ದರೂ ನನ್ನ ಕೋಪದಿಂದ ಸ್ಥಾನಚ್ಯುತನಾಗುತ್ತಿದ್ದನು. ಹೀಗಿರುವಾಗ ನಿನ್ನಂತಹ ಪಾಮರನ ಪಾಡೇನು? ಮಾತಾಪಿತೃಗಳ ಸೇವೆಯೆಂದರೆ ತಪಸ್ಸಾಧನೆ ಯೆಂದು ಬಗೆದು ಅದರಲ್ಲಿ ತತ್ಪರನಾಗಿದ್ದ, ವೇದಜ್ಞ-ಬ್ರಾಹ್ಮಣನಂತಿದ್ದ, ಮುನಿ ಸಮಾನ ವಾಗಿದ್ದವನ ಮೇಲೆ ಬುದ್ಧಿಪೂರ್ವಕವಾಗಿ ಶರವನ್ನು ಬಿಟ್ಟರೆ ಆ ಶರವನ್ನು ಬಿಡುವಾತನ ತಲೆಯು ಏಳು ಹೋಳಾಗಬೇಕು; ಆದರೆ ಈ ಕೃತ್ಯವು ನಿನ್ನ ಅಜ್ಞಾನದಿಂದಾದ ಕಾರಣ ನೀನು ಜೀವಿಸಿರುವೆ. ಬುದ್ಧಿಪೂರ್ವಕವಾಗಿ ಈ ಕೃತ್ಯವು ನಿನ್ನಿಂದಾಗಿದ್ದರೆ ರಘುವಂಶವೇ ಉಳಿಯುತ್ತಿರಲಿಲ್ಲ!” ಈ ರೀತಿ ನುಡಿದು ಶ್ರಾವಣನು ಮೃತನಾಗಿ ಬಿದ್ದ ಸ್ಥಳಕ್ಕೆ ಕರೆದೊಯ್ಯಲು ದಶರಥನಿಗೆ ಹೇಳಿದನು. ಅಲ್ಲಿ ತಲುಪಿ ಮಗನ ಮೃತಶರೀರವನ್ನು ಸ್ಪರ್ಶಿಸಿದಾಗ ಆ ತಂದೆಯು ಶೋಕ ಸಾಗರದಲ್ಲಿ ಮುಳುಗಿದನು. ಶ್ರಾವಣನ ಒಳ್ಳೆಯ ಗುಣಗಳನ್ನು ಸ್ಮರಿಸಿ ಆತನು ಬಿಕ್ಕಿಬಿಕ್ಕಿ ರೋದಿಸಿದನು. ಪತ್ನಿಯೊಡಗೂಡಿ ತನ್ನ ಪುತ್ರನಿಗೆ ತಿಲಾಂಜಲಿಯನ್ನಿತ್ತು, ನಂತರ ಈ ರೀತಿ ಎಂದನು:
“ಎಲೈ ರಾಜನೇ, ನೀನು ನನ್ನನ್ನು ಈ ಕ್ಷಣವೇ ವಧಿಸು! ಒಂದೇ ಬಾಣದಿಂದ ನನ್ನ ಏಕಮೇವ ಪುತ್ರನನ್ನು ಸಾಯಿಸಿ ನೀನು ನನ್ನನ್ನು ನಿಪುತ್ರಿಕನನ್ನಾಗಿ ಮಾಡಿರುವೆ; ಈಗ ನನಗೆ ಮರಣದ ಭಯವಿಲ್ಲ; ಅಜ್ಞಾನದಿಂದ ನೀನು ನನ್ನ ಬಾಲಕನನ್ನು