ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪವಾಣಿ

೧೩೫

ಹೊಂದಿದನು. ಈ ಸಮಾಚಾರವನ್ನು ಕೇಳಿ ಭರತನಿಗೆ ಅತೀವದುಃಖವಾಯಿತು. ಈ ಆಪತ್ತಿಗೆ ಕೈಕೇಯಿಯೇ ಕಾರಣಳೆಂದು ತಿಳಿದಾಗಂತೂ ಆತನಿಗೆ ತುಂಬಾ ಕೋಪವುಂಟಾಯಿತು; ಅತ್ಯಂತ ಕಠೋರ ನುಡಿಗಳಿಂದ ಆಕೆಯನ್ನು ನಿಂದಿಸಿದನು. ಈ ನಿನ್ನ ಕೃತಿಯಿಂದ ದಶರಥನು ಮತ್ತು ನೀನು ಪತಿಪತ್ನಿಯರಾಗಿ ಉಳಿಯಲಿಲ್ಲ. ಆತನ ಮೃತ್ಯುವಿಗೆ ಹಾಗೂ ರಾಮನ ವನವಾಸಕ್ಕೆ ಕಾರಣಳಾದವಳೇ ನೀನು; ನಾನು ನಿನ್ನ ಮಗನಾದ್ದರಿಂದ ಈ ಮಹಾಪಾತಕದ ಸಂಸರ್ಗ ನನಗೂ ತಾಗಿದೆ. ಈ ದೋಷದಿಂದ ನನ್ನ ಬಿಡುಗಡೆ ಇಲ್ಲ. ನೀನು ನನ್ನ ಮಾತೆ ಅಲ್ಲ; ಶತ್ರು! ನನ್ನ ಕುಲವನ್ನು ನಾಶಗೊಳಿಸುವ ರಾಕ್ಷಸಿಯೇ ನೀನು. ಧರ್ಮಜ್ಞನಾದ ಅಶ್ವಪತಿಯ ಕನ್ಯೆಯೆಂದು ಹೇಳಿಕೊಳ್ಳುವ ಅಧಿಕಾರ ಇನ್ನು ನಿನಗಿಲ್ಲ. ಒಬ್ಬನೇ ಮಗನಿದ್ದ ಕೌಸಲ್ಯೆಗಾದ ಪುತ್ರವಿಯೋಗದ ತೀವ್ರತೆಯನ್ನು ಕೈಕೇಯಿಗೆ ಮನದಟ್ಟು ಮಾಡಿ ಕೊಡಲು ಆತನು ಕಾಮಧೇನುವಿನ ಕಥೆಯನ್ನು ಆಕೆಗೆ ಹೇಳುತ್ತಾನೆ. ಕಠೋರ, ನಿಗ್ರಹದ ಶಬ್ದಗಳಲ್ಲಿ ಆಕೆಯನ್ನು ಹಳಿಯುತ್ತಾನೆ. ಆತನ ಉದ್ಗಾರಗಳು ಅತ್ಯಂತ ತೀಕ್ಷ್ಣವಾಗಿವೆ. ಭರತನು ಕೈಕೇಯಿಗೆ “ನೀನು ಅಗ್ನಿಪ್ರವೇಶ ಮಾಡು! ದಂಡಕಾರಣ್ಯಕ್ಕೆ ತೊಲಗು; ಉರಲು ಹಾಕಿಕೊಂಡು ಸಾಯಿ!” ಎಂದು ಹೇಳುತ್ತಾನೆ.


       ಭ್ರೂಣಹತ್ತ್ಯಾಮಸಿ ಪ್ರಾಪ್ತಾ ಕುಲಸ್ಯಾಸ್ಯ ವಿನಾಶನಾತ್ |
       ಕೈಕೇಐಇ ನರಕಂ ಗಚ್ಛ ಮಾ ಚ ತಾತಸಲೋಕತಾಮ್ ǁ೪ǁ

“ಈ ಕುಲವನ್ನು ಹಾಳುಮಾಡಿದ ಕಾರಣ ನಿನಗೆ ಭ್ರೂಣಹತ್ಯಾಪಾತಕವು ತಗುಲಿದೆ. ಅದಕ್ಕಾಗಿ ಎಲೈ ಕೈಕೇಯಿ, ನೀನು ನರಕಕ್ಕೆ ಹೋಗು; ನನ್ನ ಪಿತನಿಗೆ ದೊರೆತ ಸ್ವರ್ಗಲೋಕಕ್ಕೆ ನೀನು ಹೋಗಬೇಡ!”


       ಏಕಪುತ್ರಾ ಚ ಸಾಧ್ವೀ ಚ ವಿವತ್ಸೇಯಂ ತ್ವಯಾ ಕೃತಾ |
       ತಸ್ಮಾತ್ತ್ವಂ ಸತತಂ ದುಃಖಂ ಪ್ರೇತ್ಯ ಚೇಹ ಚ ಲಪ್ಸ್ಯಸೇ ‖೨೯‖

“ಒಬ್ಬನೇ ಮಗನಿದ್ದ, ಸಾಧ್ವಿಯಾದ ಕೌಸಲ್ಯೆಯನ್ನು ನೀನು ಪುತ್ರರಹಿತ ಳನ್ನಾಗಿ ಮಾಡಿರುವೆ; ಅದಕ್ಕಾಗಿ ಇಹಲೋಕದಲ್ಲಿ ಹಾಗೂ ಮರಣಾನಂತರವೂ ದುಃಖವೇ ನಿನ್ನ ಪಾಲಿಗೆ ಬರಲಿ.”
ಭರತನ ಈ ನುಡಿಗಳು ಶಾಪದಂತಿದ್ದರೂ ಅವು ಕ್ರೋಧ-ಉದ್ರೇಕಗಳ ಫಲರೂಪವಾಗಿವೆಯೇ ಹೊರತು ಶಾಪವಲ್ಲ. ಭರತನಿಗೆ ಶಾಪ ಕೊಡುವ ಅಧಿಕಾರ ಹೇಗೆ ಪ್ರಾಪ್ತವಾಗಿತ್ತೆಂಬ ಪ್ರಶ್ನೆಯು ಹಾಗೇ ಉಳಿಯುತ್ತದೆ.