ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೩೮

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


೨೫. (ದಂಡಕಾರಣ್ಯದಲ್ಲಿಯ) ಮುನಿಗಳು < ರಾಕ್ಷಸರು

ಅರಣ್ಯಕಂಡ/೧೦

ದಂಡಕಾರಣ್ಯದಲ್ಲಿ ವಾಸಿಸುತ್ತಿದ್ದಾಗ ರಾಕ್ಷಸರನ್ನು ಸಂಹರಿಸಲು ರಾಮನು ಧನಸ್ಸನ್ನು ಧರಿಸಿದ್ದನು. ಈ ಸಂಗತಿಯು ಸೀತೆಗೆ ಉಚಿತವೆನಿಸಲಿಲ್ಲ. ಸೀತೆಯು ತನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ರಾಮನ ಮುಂದಿಟ್ಟಳು. ಆಗ ಕ್ಷತ್ರಿಯರ ಕುಲಧರ್ಮ ಯಾವುದೆಂಬುದನ್ನು ಉತ್ತಮವಾಗಿ ವಿವರಿಸಿದಳು. ರಾಮನು ಅದಕ್ಕೆ ಪ್ರತ್ಯುತ್ತರವಾಗಿ ಈ ರೀತಿ ಹೇಳುತ್ತಾನೆ:
ಹುಟ್ಟಿನಿಂದ ಕ್ಷತ್ರಿಯನಾಗಿದ್ದರೂ ಪರಿಸ್ಥಿತಿಯ ಮೂಲಕ ರಾಮನು ವಲ್ಕಲಗಳನ್ನು ಧರಿಸಿ ಮುನಿಯಂತೆ ವನದಲ್ಲಿ ವಾಸವಿದ್ದು. ಇಂಥ ಕಾಲದಲ್ಲಿ ಸ್ವಸಂರಕ್ಷಣೆಗೆಂದಾಗಲೀ, ಮುನಿಜನರ ಸ್ವಾಸ್ಥ್ಯವನ್ನು ಕಾಪಾಡಲೋಸುಗವಾಗಿಯೇ ಆಗಲಿ, ಶಸ್ತ್ರಧಾರಿಯಾಗಿರುವದು ಸೀತೆಗೆ ಸೂಕ್ತವೆನಿಸಲಿಲ್ಲ. ಸತತಶಸ್ತ್ರಸಂಯೋಗವು ಪುರುಷನ ಮನಸ್ಸಿನಲ್ಲಿ ವಿಕೃತಿಯನ್ನುಂಟುಮಾಡುತ್ತದೆ, ಎಂದು ಹೇಳಿ, ಅದನ್ನು ಸಮರ್ಥಿಸಲು ಸೀತೆಯು ಒಂದು ಕಥೆಯನ್ನು ಹೇಳುತ್ತಾಳೆ. ಮುನಿಗಳ ಬಳಿ ಇಂದ್ರನು ತನ್ನ ಶಸ್ತ್ರಗಳನ್ನು ಠೇವಣಿ ಎಂದು ಇಟ್ಟಕಾರಣ ಆ ಮುನಿಗಳು ಕ್ರೂರ ಕರ್ಮಿಗಳಾದರು. ಈ ಕಥೆಯನ್ನು ಹೇಳಿ, ರಾಮನು ರಾಕ್ಷಸರ ಸಂಹಾರದ ವಿಚಾರವನ್ನು ಬಿಟ್ಟುಕೊಡಬೇಕೆಂದು ಪ್ರಯತ್ನಿಸುತ್ತಾಳೆ. ಆಕೆಯ ಹೇಳಿಕೆಯ ಯೋಗ್ಯವಾದದ್ದು, ಹಿತವಾದದ್ದು ಎಂಬುದನ್ನು ಅರಿತ ರಾಮನು ಶಾಂತ ಚಿತ್ತದಿಂದ ಈ ರೀತಿ ಹೇಳುತ್ತಾನೆ:
“ಕ್ಷತ್ರಿಯರು ಶಸ್ತ್ರವನ್ನು ಯಾವಾಗ ಧರಿಸಬೇಕೆಂಬುದನ್ನು ನೀನು ಬಲ್ಲೆ; ನರಮಾಂಸಭಕ್ಷಕರಾದ ರಾಕ್ಷಸರು ನಿಷ್ಕಾರಣವಾಗಿ ದಂಡಕಾರಣ್ಯದಲ್ಲಿಯ ಮುನಿಗಳ ತಪಸ್ಸಿನಲ್ಲಿ ವಿಘ್ನಗಳನ್ನು ತಂದು ಅವರನ್ನು ಭಕ್ಷಿಸುತ್ತಿದ್ದಾರೆ. 'ನಮ್ಮನ್ನು ಅನುಗ್ರಹಿಸಿ' ಎಂದು ಆ ಮುನಿಗಳು ನನಗೆ ವಿನಂತಿಸಿದ್ದಾರೆ. ಅದನ್ನು ನಾನು ಹೇಗೆ ದುರ್ಲಕ್ಷಿಸಲಿ? ಬ್ರಾಹ್ಮಣರ ರಕ್ಷಣೆಯೇ ಕ್ಷತ್ರಿಯರ ಧರ್ಮ. ಅಂತಹದರಲ್ಲಿ ರಕ್ಷಣೆಗಾಗಿ ನನಗೆ ಅಂಗಲಾಚಿ ಅವರು ಬೇಡಿಕೊಳ್ಳುವದೆಂದರೆ ಕ್ಷತ್ರಿಯನಾದ ನನಗೆ ಅಪಕೀರ್ತಿಕರ. ಇಷ್ಟದಂತೆ ಬೇಕುಬೇಕಾದ ರೂಪಗಳನ್ನು ಧರಿಸಬಲ್ಲ ರಾಕ್ಷಸರು ಅವರನ್ನು ಬಹಳ ಪೀಡಿಸುತ್ತಿದ್ದಾರೆ. ಹೋಮವನ್ನು ಮಾಡುತ್ತಿದ್ದಾಗ ಮತ್ತು ಪರ್ವಕಾಲದಲ್ಲಿ ರಾಕ್ಷಸರು ಮುನಿಗಳನ್ನು ಹಿಂಸಿಸುತ್ತಾರೆ. ಅಂಥ ಮುನಿಗಳನ್ನು ರಾಕ್ಷಸರಿಂದ ರಕ್ಷಿಸುವವನು ನಾನೇ ಎಂದು ಅವರು ಗ್ರಹಿಸಿದ್ದಾರೆ. ನಾನೇ ಅವರ ರಕ್ಷಣಕರ್ತನೆಂದು ಹೇಳುತ್ತಾರೆ.”