ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶಾಪವಾಣಿ

೧೪೫


೩೧. ಮತಂಗ < ವಾಲಿ, ವಾನರ

ಕಿಷ್ಕಿಂಧಾಕಾಂಡ/೧೧

ವಾಲಿಯ ಪ್ರಚಂಡ ಪೌರುಷ, ಸಾಮರ್ಥ್ಯ, ಧೈರ್ಯಗಳ ಬಗ್ಗೆ ಸುಗ್ರೀವನು ರಾಮನಿಗೆ ಹೇಳುತ್ತಿದ್ದಾನೆ:
"ವರಪ್ರಾಪ್ತಿಯಾದನಂತರ ದುಂದುಭಿ ಎಂಬ ರಾಕ್ಷಸನು ಉನ್ಮತ್ತನಾಗಿದ್ದನು. ತನ್ನ ಶಕ್ತಿ ಬಲಗಳ ಬಗ್ಗೆ ಆತನಿಗೆ ಬಹಳ ಜಂಬವುಂಟಾಗಿತ್ತು. ಕಾಳಗದಲ್ಲಿ ತನ್ನನ್ನು ಸೋಲಿಸುವವರು ಯಾರೂ ಇಲ್ಲ. ತಾನು ಅಜಿಂಕ್ಯನೆಂಬ ಅಹಂಕಾರದಿಂದ ಮೆರೆಯುತ್ತಿದ್ದನು. ಆತನು ಸಮುದ್ರ ರಾಜನನ್ನು ಯುದ್ಧಕ್ಕೆ ಆಹ್ವಾನಿಸಿದನು. ಸಮುದ್ರರಾಜನು 'ನಿನ್ನೊಡನೆ ಯುದ್ಧ ಮಾಡಲುನಾನು ಶಕ್ತನಲ್ಲ; 'ಹಿಮವಾನ' ಪರ್ವತರಾಜನು ನಿನ್ನೊಡನೆ ಯುದ್ಧಕ್ಕೆ ತಕ್ಕವನು" ಎಂದು ಹೇಳಿದನು. ದುಂದುಭಿಯು 'ಹಿಮವಾನ'ನನ್ನು ಯುದ್ದಕ್ಕೆ ಆಹ್ವಾನಿಸಿದನು. "ತಪಸ್ವಿಗಳಿಗೆ ಆಶ್ರಯಸ್ಥಾನನಾದ ನಾನು ರಣರಂಗದಲ್ಲಿ ಪ್ರವೀಣನಲ್ಲ; ಕಿಷ್ಕಿಂಧಾ ಪಟ್ಟಣದಲ್ಲಿರುವ ವಾಲಿಯು ನಿನಗೆ ಸಾಟಿಯಾದ ಏಕಮೇವ ವೀರನಿದ್ದಾನೆಂದು" ಹೇಳಿದನು. ದುಂದುಭಿಯು ಕೋಣದ ರೂಪವನ್ನು ಧರಿಸಿ ಕಿಷ್ಕಿಂಧೆಯ ಬಳಿಯಲ್ಲಿಯ ಮರಗಿಡಗಳನ್ನು ಧ್ವಂಸಗೊಳಿಸುತ್ತ, ಭೂಮಿಯು ನಡುಗುವಂತೆ ಭೀಕರವಾಗಿ ಗುಟುರುಹಾಕುತ್ತ ವಾಲಿಯ ಬಳಿ ಬಂದನು. ಅದನ್ನು ಕೇಳಿ ವಾಲಿಯು ಆತನಿಗೆ ಎದುರಾದನು. ದುಂದುಭಿಯ ಅತಿಶಯ ಉನ್ಮತ್ತ, ಉದ್ಧಟ ಮಾತುಗಳನ್ನು ಕೇಳಿ ವಾಲಿಯು ದುಂದುಭಿಯನ್ನು ಕೊಂಬುಗಳಿಂದ ಎತ್ತಿ ದೂರಕ್ಕೆ ಎಸೆದನು. ಚೆನ್ನಾಗಿ ಒದೆ ಹಾಕಿ, ಮುಷ್ಟಿಗಳಿಂದ ಗುದ್ದಿ, ಮೊಳಕಾಲಿನಿಂದ ಜಜ್ಜಿ, ಮರಗಳಿಂದ ಹೊಡೆದು ಆತನನ್ನು ಹಣ್ಣುಗಾಯಿ-ನೀರುಗಾಯಿಯನ್ನಾಗಿ ಮಾಡಿದನು. ದುಂದುಭಿಯ ಕಿವಿಮೂಗುಗಳಿಂದ ರಕ್ತಸ್ರಾವವಾಗಹತ್ತಿತು. ಆಗ ವಾಲಿಯು ಆತನನ್ನು ಸಾಯಿಸಿ ಯೋಜನದಷ್ಟು ದೂರ ಎಸೆದಾಗ, ಆ ಕೋಣದ ಬಾಯಿಂದ ತೊಟಕುತ್ತಿದ್ದ ರಕ್ತದ ಹನಿಗಳು ಮತಂಗ ಋಷಿಯ ಆಶ್ರಮದಲ್ಲಿ ಬಿದ್ದವು. ಇದನ್ನು ವೀಕ್ಷಿಸಿದ ಋಷಿಗೆ ತಾಳಲಾರದ ಕೋಪ ಬಂದಿತು. ನಡೆದುದೇನೆಂಬುದನ್ನು ನೋಡಿದಾಗ ಗುಡ್ಡದ ಗಾತ್ರದಷ್ಟು ಒಂದು ಕೋಣವು ಕುಸಿದುಬಿದ್ದದ್ದು ಕಂಡಿತು. ಈ ಕೃತ್ಯವು ಕಪಿಯದೆಂದು ಮುನಿಯು ತಪೋಬಲದಿಂದ ಅರಿತುಕೊಂಡು ಆ ವಾನರನಿಗೆ ಶಪಿಸಿದನು:


           ಇಹ ತೇನಾಪ್ರವೇಷ್ಟವ್ಯಂ ಪ್ರವಿಷ್ಟಸ್ಯ ವಧೋ ಭವೇತ್ |
           ಮತ್ಸಂಶ್ರಯಂ ಯೇನ ದೂಷಿತಂ ರುಧಿರಸ್ರವೈಃ ‖೫೩‖