ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶಾಪವಾಣಿ

೧೪೯


ಈ ಶಾಪವಿದ್ದರೂ ಅವಳು ತನ್ನ ಇಚ್ಛೆಯನುಸಾರ ರೂಪವನ್ನು ಬದಲಾಯಿಸ ಬಹುದಿತ್ತು. ಒಮ್ಮೆ ಅವಳು ಒಂದು ಪರ್ವತದ ತುದಿಯಲ್ಲಿದ್ದಾಗ ವಾಯುವು ಆಕೆಯ ವಸ್ತ್ರವನ್ನು ಹಾರಿಸಿದನು. ಆಕೆಯ ಸುಂದರವಾದ ಅಂಗಾಂಗಗಳನ್ನು ಕಂಡು ಕಾಮಪರವಶನಾದ ವಾಯುವು, ಆಕೆಯನ್ನು ಆಲಿಂಗಿಸಿ ತನ್ನ ತೇಜಸ್ಸನ್ನು (ವೀರ್ಯ) ಅವಳಲ್ಲಿ ಸ್ಥಾಪಿಸಿದನು. ಆಗ ಅವಳು ಗೊಂದಲಕ್ಕೀಡಾದಳು. ಪಾತಿವ್ರತ್ಯವು ಭ್ರಷ್ಟವಾಯಿತೆಂಬ ಭೀತಿಯು ಅವಳಿಗಾಯಿತು. ಆ ಭೀತಿಯು ವ್ಯರ್ಥವಾಗಿದೆ ಎಂದು ವಾಯುವು ಆಕೆಗೆ ತಿಳಿಸಿ ಹೇಳಿದನು. "ಮಾನಸಿಕ ಭೋಗದಿಂದ ತನ್ನ ತೇಜಸ್ಸನ್ನು ಅವಳಲ್ಲಿ ಇಟ್ಟ ಕಾರಣ ಆಕೆಗೆ ಅತ್ಯಂತ ಶೂರವೀರನಾದ, ಮಹಾತೇಜಸ್ವಿಯಾದ, ಬುದ್ಧಿವಂತನಾದ, ಪರಾಕ್ರಮಿಯಾದ ಮಗನು ಹುಟ್ಟುವನು; ವಾಯುವಿನಂತೆ ಅವನು ಗಗನದಲ್ಲಿ ಸಂಚರಿಸಬಲ್ಲನು. ಸಮುದ್ರವನ್ನು ಉಲ್ಲಂಘಿಸಬಲ್ಲನು" ಎಂಬ ಆಶ್ವಾಸನೆಯನ್ನು ಆಕೆಗೆ ಕೊಟ್ಟನು. ಅಕೆಯ ಮಗನೆಂದರೆ ಹನುಮಂತ.
ಈ ಶಾಪವನ್ನು ಕೊಟ್ಟ ಋಷಿಯ ಹೆಸರಿನ ಉಲ್ಲೇಖವಿಲ್ಲ. ಯಾವ ಕಾರಣಕ್ಕಾಗಿ ಶಾಪವನ್ನು ಕೊಟ್ಟಿದ್ದನು ಎಂಬುದರ ಮಾಹಿತಿಯೂ ಇಲ್ಲ. ಆಕೆಯ ಬಿನ್ನಹದ ಮೇರೆಗೆ ಋಷಿಯು ಉಃಶಾಪವನ್ನು ಕೊಟ್ಟಿದ್ದಾನೆ; ಆದ್ದರಿಂದ ಅವಳು ತನ್ನ ಇಷ್ಟದಂತೆ ವಾನರರೂಪವನ್ನು ಇಲ್ಲವೇ ಮನುಷ್ಯ ರೂಪವನ್ನು ಧರಿಸ ಬಹುದಿತ್ತು.
(ಶ್ರೀರಾಮಕೋಶಾಂತರ್ಗತ ಹನುಮಾನಕೋಶ, ಪು.೨)

೩೪. ? < ಲಂಕಾದೇವಿ

ಸುಂದರಕಾಂಡ/೩

ಲಂಕಾದೇವಿಯು ಹನುಮಂತನಿಗೆ ತನ್ನ ಚರಿತ್ರೆಯನ್ನು ಹೇಳುತ್ತಾಳೆ:
ಹನುಮಂತನು ಲಂಕೆಯತ್ತ ಹಾರಿ ಹೋಗುತ್ತಿದ್ದಾಗ ಲಂಕಾನಗರಿಯು ಅಕರಾಳ ವಿಕರಾಳ ಸ್ತ್ರೀರೂಪವನ್ನು ಧರಿಸಿ, ಭಯಂಕರವಾಗಿ ಗರ್ಜಿಸುತ್ತ ಹನುಮಂತನ ಮುಂದೆ ಬಂದು ನಿಂತಳು. ರಾವಣನ ಸೈನ್ಯದಿಂದ ರಕ್ಷಿಸಲ್ಪಡುತ್ತಿದ್ದ ಲಂಕೆಯಲ್ಲಿ ಹನುಮಂತನಿಗೆ ಪ್ರವೇಶವು ಸಾಧ್ಯವಿಲ್ಲವೆಂದು ನಿಖರವಾಗಿ ಹೇಳಿದಳು. ಹನುಮಂತನ ಆಗಮನದ ಉದ್ದೇಶವನ್ನು ಅವಳು ಕೇಳಿದಾಗ, ಆತನು 'ಸತ್ಯವನ್ನು ಹೇಳುವೆ' ಎಂಬ ಆಶ್ವಾಸನೆಯನ್ನು ಕೊಟ್ಟು, ಅವಳು ಯಾರೆಂಬುದನ್ನು ಮೊದಲು ಹೇಳಬೇಕೆಂದು ಆಗ್ರಹಪಟ್ಟನು. ಅವಳು ಕೋಪಗೊಂಡು ಈ ರೀತಿ ಅಂದಳು: