ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೫೦

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


"ನಾನು ಅಜಿಂಕ್ಯಳು; ಮಹಾತ್ಮನಾದ, ರಾಕ್ಷಸಾಧಿಪತಿಯಾದ ರಾವಣನ ಆಜ್ಞೆಯನ್ನು ಪಾಲಿಸುತ್ತಿದ್ದೇನೆ. ಅವನ ಆಜ್ಞೆಯಂತೆ ನಾನು ಲಂಕಾಪಟ್ಟಣವನ್ನು ರಕ್ಷಿಸುತ್ತಿದ್ದೇನೆ. ನನ್ನನ್ನು ಕಡೆಗಣಿಸಿ ನೀನು ಈ ನಗರವನ್ನು ಪ್ರವೇಶಿಸುವದು ಎಂದಿಗೂ ಸಾಧ್ಯವಿಲ್ಲ. ಇಂದು ನನ್ನಿಂದ ನಿನ್ನ ವಧೆಯಾಗಲಿರುವದು. ನೀನು ಅಸುನೀಗಿ ದೀರ್ಘವಾಗಿ ನಿದ್ರಿಸುವೆ. ನಾನೇ ಲಂಕಾದೇವಿ" ಎಂದಳು. ಆಗ ಹನುಮಂತನು, 'ಲಂಕಾ ನಗರವನ್ನು ಸುಮ್ಮನೆ ನೋಡಿಕೊಂಡು ಹೋಗುವ ಇಚ್ಛೆ ನನಗಿದೆ' ಎಂದು ಪ್ರಕಟಿಸಿದಾಗ ಆಕೆಯು ಭಯಂಕರವಾಗಿ ಗರ್ಜಿಸಿ ಆತನಿಗೆ ಬಲವಾದ ಏಟನ್ನು ಕೊಟ್ಟಳು. ಆಕೆಯು 'ಸ್ತ್ರೀ' ಇದ್ದುದರಿಂದ ಕೊಲ್ಲಬಾರದೆಂದು ಹನುಮಂತನೂ ಆಕೆಯ ಕೆನ್ನೆಗೆ ಬಲವಾಗಿ ಹೊಡೆದನು. ಆ ಏಟಿನಿಂದ ಹತಬಲಳಾಗಿ ಆ ನಿಶಾಚರಿಯು ಭೂಮಿಗೆ ಧೊಪ್ಪನೆ ಬಿದ್ದಳು. ಹನುಮಂತನಿಗೆ ಅವಳ ಬಗ್ಗೆ ಕನಿಕರವುಂಟಾಯಿತು. ಅವಳು ಬಿಕ್ಕಿಬಿಕ್ಕಿ ಅಳುತ್ತ ತನ್ನ ಪರಾಜಯವನ್ನು ಒಪ್ಪಿಕೊಂಡಳು. ಹನುಮಂತನಿಗೆ ಪ್ರಸನ್ನನಾಗಲು ಪ್ರಾರ್ಥಿಸಿ "ಅತಿಬಲಾಢ್ಯ ಪುರುಷರಿಗೆ ಶೋಭಿಸುವ ಹಾಗೆ ಶಾಸ್ತ್ರಮರ್ಯಾದೆಯನ್ನನುಸರಿಸಿ ಕ್ಷಮೆ ತೋರಬೇಕೆಂದು" ಹನುಮಂತನನ್ನು ಯಾಚಿಸಿದಳು ಮತ್ತು ಮುಂದೆ ಈ ರೀತಿ ಹೇಳಿದಳು: 'ಬ್ರಹ್ಮದೇವನು ನನಗೆ ವರವನ್ನು ಕೊಟ್ಟಿದ್ದಾನೆ. ಯಾವ ವಾನರನು ಎಂದು ತನ್ನ ಶೌರ್ಯದಿಂದ ನಿನ್ನನ್ನು ಸೋಲಿಸುವನೋ ಅಂದಿನಿಂದ ರಾಕ್ಷಸ ಕುಲಕ್ಕೆ ಭಯವಿದೆ.' ನಿನ್ನ ಭೇಟಿಯಿಂದ ಆ ಸಮಯವು ಬಂದೊದಗಿದೆ. ಸೀತೆಯ ನಿಮಿತ್ತದಿಂದ ದುರಾತ್ಮನಾದ ರಾವಣನ ಮತ್ತು ಸಕಲ ರಾಕ್ಷಸರ ವಿನಾಶಕಾಲವು ಸಮೀಪಿಸಿದೆ. ಎಲೈ ಹನುಮಂತನೇ, ನೀನು ಲಂಕಾನಗರವನ್ನು ಪ್ರವೇಶಿಸು; ನಿನ್ನ ಇಷ್ಟಕಾರ್ಯವನ್ನು ಪೂರೈಸು!" ಎಂದು ಲಂಕಾದೇವಿಯು ಹೇಳಿದಳು.


           ಪ್ರವಿಶ್ಯ ಶಾವೋಪಹತಾಂ ಹರೀಶ್ವರ |
           ಪುರೀಂ ಶುಭಾಂ ರಾಕ್ಷಸಮುಖ್ಯಪಾಲಿತಾಮ್ ‖೫೧‖


ಪ್ರಮುಖ ರಾಕ್ಷಸರಿಂದ ರಕ್ಷಿಸಲ್ಪಟ್ಟ, ಶಾಪಗ್ರಸ್ತವಾದ ಆ ನಗರವನ್ನು ಪ್ರವೇಶಿಸು. ಲಂಕಾದಹನದ ವರ್ಣನೆಯಲ್ಲಿಯೂ ಈ ಕೆಳಗಿನ ಉಲ್ಲೇಖವು ಕಂಡುಬರುತ್ತದೆ:


           ಹನೂಮತಃ ಕ್ರೋಧಬಲಾಭಿಭೂತಾ |
           ಬಭೂವ ಶಾವೋಪಹತೇವ ಲಂಕಾ ‖

(ಸುಂದರಕಾಂಡ, ೫೪-೪೧)