ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೫೨

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


"ಈ ದಿನದಿಂದ ಯಾವದೇ ಪರಸ್ತ್ರೀಯನ್ನು ಬಲಾತ್ಕಾರದಿಂದ ಭೋಗಿಸಿದರೆ ತಕ್ಷಣ ನಿನ್ನ ತಲೆ ನೂರು ಹೋಳಾಗಿ ಸಿಡಿದುಹೋಗುವುದರಲ್ಲಿ ಸಂದೇಹವಿಲ್ಲ."
ಈ ರೀತಿಯ ಬ್ರಹ್ಮದೇವನ ಶಾಪಕ್ಕೆ ರಾವಣನು ಭಯಪಟ್ಟ ಕಾರಣ, ವಿದೇಹದ ರಾಜಕನ್ಯೆಯಾದ ಸೀತೆಯನ್ನು ಶುಭಶಯ್ಯೆಯಲ್ಲಿ ಉಪಭೋಗಿಸಲು ಅಸಮರ್ಥನಾದನು.
ಇದು ಕಟ್ಟಳೆಯ ಶಾಪವಾಗಿದೆ.

೩೬. ಶುಕ < ರಾಮ

ಯುದ್ಧಕಾಂಡ/೨೦

ರಾವಣನನ್ನು ವಧಿಸುವ ಕಾಯಕದಲ್ಲಿ ರಾಮನಿಗೆ ಸಹಾಯ ಮಾಡಲು ಸುಗ್ರೀವನು ತನ್ನ ಸೈನ್ಯವನ್ನು ಸಮುದ್ರತೀರಕ್ಕೆ ತಂದು ಇರಿಸಿದನು. ರಾವಣನ ಗುಪ್ತಚರನಾದ ಶಾರ್ದೂಲನು, ಮುಂಬರಲಿದ್ದ ಆಕ್ರಮಣದ ಮುನ್ಸೂಚನೆಯನ್ನು ರಾವಣನಿಗೆ ಕೊಟ್ಟನು. ರಾವಣನಿಗೆ ತುಂಬಾ ಕೋಪವುಂಟಾಗಿದ್ದರೂ ಸುಗ್ರೀವನೊಡನೆ ಸಾಮೋಪಚಾರಕ್ಕಾಗಿ 'ಶುಕ'ನೆಂಬ ರಾಕ್ಷಸನನ್ನು ದೂತನನ್ನಾಗಿ ಕಳುಹಿಸಿದನು. ಶುಕನು ಪಕ್ಷಿಯ ವೇಷವನ್ನು ಧರಿಸಿ, ರಾವಣನ ಹೇಳಿಕೆಯನ್ನು ಸ್ಪಷ್ಟವಾಗಿ ಸುಗ್ರೀವನಿಗೆ ತಿಳಿಸಿದನು. ಆ ಸಮಯದಲ್ಲಿ ವಾನರರು ಆ ಪಕ್ಷಿಯ ಗರಿಗಳನ್ನು ಕಿತ್ತು ಪಕ್ಷಿಗೆ ಉಪದ್ರವ ಕೊಡಲು ಆರಂಭಿಸಿದರು. ತಾನು ದೂತನೆಂದು ಬಂದಿರುವುದರಿಂದ ಈ ರೀತಿ ಉಪಟಳವನ್ನು ಕೊಡುವದು ಸರಿಯಲ್ಲವೆಂದನು. ಇದನ್ನು ಕೇಳಿ ರಾಮನು, 'ಆತನಿಗೆ ಉಪದ್ರವವನ್ನು ಮಾಡಕೂಡದು!' ಎಂದು ವಾನರರಿಗೆ ನಿಷ್ಠುರವಾಗಿ ಹೇಳಿದನು. ಶುಕನು ದೂತನಾಗಿರದೇ ರಾವಣನ ಗುಪ್ತಚರನಾಗಿರಬೇಕೆಂಬ ಸಂದೇಹವು ಅಂಗದನಿಗಾಯಿತು. ಸುಗ್ರೀವನಿಗೆ ಅದನ್ನು ನುಡಿದನು. ಅಷ್ಟೇ ಅಲ್ಲದೇ ಶುಕನನ್ನು ಲಂಕೆಗೆ ಮರಳಿ ಹೋಗಗೊಡದೇ ಸೆರೆ ಹಿಡಿಯಬೇಕೆಂದು ಸ್ಪಷ್ಟ ಮತವನ್ನಿತ್ತನು. ಆಗ ಸುಗ್ರೀವನ ಆಜ್ಞೆಯಿಂದ ವಾನರರು ಆಕಾಶದತ್ತ ಹಾರಿ ಶುಕಪಕ್ಷಿರೂಪಧಾರಿಯಾದ ರಾಕ್ಷಸನನ್ನು ಬಂಧಿಸಿ, ಆತನಿಗೆ ಗಾಸಿಗೊಳಿಸಹತ್ತಿದರು. ಆಗ ಶುಕನು ರಾಮನಿಗೆ ಇಂತೆಂದನು-
'ಈ ಕಪಿಗಳು ನನ್ನ ಗರಿಗಳನ್ನು ಕೀಳುತ್ತಿದ್ದಾರೆ; ನನ್ನ ಕಣ್ಣುಗಳಿಗೆ ತಿವಿಯುತ್ತಿದ್ದಾರೆ.' ಕಾರಣ-