ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶಾಪವಾಣಿ

೧೫೭


ತಂದೆಯ ಹೇಳಿಕೆಯಂತೆ ಆ ಕನ್ಯೆಯು, ವಿಶ್ರವಾ ಮುನಿಯ ತಪಸ್ಸನ್ನು ಆಚರಿಸುತ್ತಿದ್ದ ಸ್ಥಳಕ್ಕೆ ಹೋಗಿ ಆತನೆದುರು ನಿಂತಳು. ಆಕೆಯ ಬರುವಿಕೆಯ ಕಾರಣವನ್ನು ಮುನಿಯು ವಿಚಾರಿಸಿದಾಗ, ಕೈಕಸಿಯು ವಿನಯದಿಂದ ಈ ರೀತಿ ಹೇಳಿದಳು:
"ಹೇ ಮುನಿಶ್ರೇಷ್ಠರೇ! ನಾನು ಇಲ್ಲಿಗೆ ಬಂದ ಉದ್ದೇಶವನ್ನು ತಪಃಪ್ರಭಾವದಿಂದ ನೀವೇ ಅರಿತುಕೊಳ್ಳಿರಿ! ಹೇ ಬ್ರಹ್ಮರ್ಷಿ, ತಂದೆಯ ಆಜ್ಞೆಯಂತೆ ನಾನು ಇಲ್ಲಿ ಬಂದಿದ್ದೇನೆಂದು ತಿಳಿಯಬೇಕು; ನನ್ನ ಹೆಸರು ಕೈಕಸಿ, ಮಿಕ್ಕ ವಿಷಯವನ್ನು ನೀವೇ ಅರಿತುಕೊಳ್ಳುವಿರಿ!”
ವಿಶ್ರವಾ ಈತನು ಧ್ಯಾನಸ್ಥನಾಗಿ ಆಕೆಯ ಆಗಮನದ ಉದ್ದೇಶವನ್ನು ತಿಳಿದುಕೊಂಡನು. ಆತನು ಕೈಕಸಿಗೆ ಈ ರೀತಿ ನುಡಿದನು:


            ಸುತಾಭಿಲಾಷೊ ಮತ್ತಸ್ತೇ ಮತ್ತಮಾತಂಗಗಾಮಿನೀ |
            ದಾರುಣಾಯಾಂ ತು ವೇಲಾಯಾಂ ಯಸ್ಮಾತ್ತ್ವಂ ಮಾಮುಪಸ್ಥಿತಾ ‖೨೨‖
            ಶ್ರುಣು ತಸ್ಮಾತ್ಸುತಾನ್ಭದ್ರೇ ಯಾದೃಶಾನ್ವನಯಿಷ್ಯಸಿ |
            ದಾರುಣಾನ್ದಾರುಣಾಕಾರಾನ್ದಾರುಣಾಭಿಜನಪ್ರಿಯಾನ್ ‖೨೩‖
            ಪ್ರಸವಿಷ್ಯಸಿ ಸುಶ್ರೋಣಿ ರಾಕ್ಷಾಸಾಂ ಕ್ರೂರಕರ್ಮಣಃ ‖೨೪‖


"ಎಲೈ ಮತ್ತ ಗಜಗಾಮಿನಿಯೇ, ನನ್ನಿಂದ ಪುತ್ರರನ್ನು ಪಡೆಯಲೆಂದು ನೀನು ಬಂದಿರುವೆ; ಆದರೆ, ನೀನು ಬಂದ ಸಮಯವು ತೀರ ಕ್ರೂರ ಗಳಿಗೆಯಾಗಿದೆ; ಆದ್ದರಿಂದ ನೀನು ಎಂತಹ ಮಕ್ಕಳನ್ನು ಹೊಂದುವೆ ಎಂಬುದನ್ನು ಆಲಿಸು! ಸ್ವಭಾವದಿಂದಲೂ ಸೌಷ್ಠವದಿಂದಲೂ ಭಯಕಾರಿಯಾಗಿರುವವರು, ಕ್ರೂರಭಾಂಧವರನ್ನು ಬಯಸುವವರು, ಮತ್ತು ಕ್ರೂರ ಕರ್ಮಗಳನ್ನು ಮಾಡುವವರು, ಅಂತಹ ರಾಕ್ಷಸರು ನಿನಗೆ ಹುಟ್ಟುವರು."
ಮುನಿಯ ಈ ಮಾತನ್ನು ಕೇಳಿ ವಿನಯದಿಂದ ಈ ರೀತಿ ಎಂದಳು: "ಹೇ ಭಗವನ್, ತಮ್ಮಂಥ ಬ್ರಹ್ಮಜ್ಞರಿಂದ ಈ ಪರಿಯ ದುರಾಚಾರಿ ಪುತ್ರರನ್ನು ಪಡೆಯುವ ಇಚ್ಛೆ ನನಗಿಲ್ಲ; ನೀವು ನನಗೆ ದಯೆ ತೋರಿರಿ!"
ಆಕೆಯ ಬಿನ್ನಹವನ್ನು ಮನ್ನಿಸಿ, ಮುನಿಯು ಈ ರೀತಿ ಉತ್ತರಿಸಿದನು- "ನಿನ್ನ ಕೊನೆಯ ಮಗನು ನನ್ನ ವಂಶಕ್ಕೆ ಅನುರೂಪವಾದನೂ ಧರ್ಮಾತ್ಮನೂ ಆಗುವನು." ಕಾಲಕ್ರಮೇಣ ಕೈಕಸಿಗೆ ರಾವನ, ಕುಂಭಕರ್ಣ, ಶೂರ್ಪನಖಿ ಮತ್ತು ವಿಭೀಷಣ ಎಂಬ ಮಕ್ಕಳಾದರು.
ಕೈಕಸಿಯ ಬಿನ್ನಹವು ಯಾಚಿತ ಉಃಶಾಪದಂತಿದೆ.