ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೬೨

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಮತ್ತು ದಂತಗಳನ್ನು ಆಯುಧಗಳಂತೆ ಬಳಸುವವರು, ಮನಸ್ಸಿನ ವೇಗವಿದ್ದವರು.
ಶಕ್ತಿ ಸಾಮರ್ಥ್ಯಗಳಿಂದ ಸ್ಫುರಣಗೊಳ್ಳುವವರು, ಮೈಮರೆತು ಯುದ್ಧದಲ್ಲಿ
ಕಾದುವವರು, ಚಲಿಸುವ ಪರ್ವತಗಳಷ್ಟು ಪ್ರಚಂಡರು, ಅಂಥ ವಾನರರು
ಒಟ್ಟುಗೂಡಿ ನಿನ್ನ, ನಿನ್ನ ಮಂತ್ರಿಗಳ, ನಿನ್ನ ಪುತ್ರರೆಲ್ಲರ ಗರ್ವವನ್ನು, ಬಲವನ್ನು
ನಾಮಶೇಷ ಮಾಡುವರು. ಎಲೈ ರಾಕ್ಷಸನೇ, ಸಾಂಪ್ರತು ನನ್ನ ಕೈಯಿಂದಲೇ
ನಿನ್ನ ವಧೆಯು ಸಾಧ್ಯವಿದ್ದರೂ ನಿನ್ನನ್ನು ಕೊಲ್ಲುವದು ಉಚಿತವಲ್ಲ; ಏಕೆಂದರೆ
ನಿನ್ನ ಕರ್ಮಗಳಿಂದ ಈ ಮೊದಲೇ ವಧಿಸಲ್ಪಟ್ಟಿರುವೆ.”
ನಂದಿಯು ಇಷ್ಟು ನಿಚ್ಚಳವಾಗಿ, ಆತನ ಭವಿಷ್ಯದ ಕಲ್ಪನೆಯನ್ನು ರಾವಣನಿಗೆ
ಕೊಟ್ಟಿದ್ದಾನೆ. ಇಷ್ಟಾದರೂ ರಾವಣನು ಶಂಕರನ ಅವಹೇಳನೆಯನ್ನು ನಿಲ್ಲಿಸಲಿಲ್ಲ.
ಆ ಪರ್ವತವನ್ನೇ ಬುಡಮೇಲು ಮಾಡುವ ಉದ್ದೇಶದಿಂದ ರಾವಣನು ತನ್ನ
ಕೈಗಳನ್ನು ಪರ್ವತದ ಅಡಿಯಲ್ಲಿ ಹಾಕಿದನು. ಆಗ ಶಂಕರನು ತನ್ನ ಪಾದದ
ಹೆಬ್ಬೆರಳಿನಿಂದ ಪರ್ವತವನ್ನು ಅದುಮಿದಾಗ ರಾವಣನ ಕೈಗಳೆರಡೂ ಹತ್ತಿಕ್ಕಲ್ಪಟ್ಟವು.
ಇದನ್ನು ಕಂಡು ಎಲ್ಲರೂ ಆಶ್ಚರ್ಯಭರಿತರಾದರು. ಶಂಕರನನ್ನು ಒಲಿಸಿಕೊಳ್ಳಲು
ರಾವಣನಿಗೆ ಹೇಳಿದರು. ರಾವಣನು ಶಂಕರನನ್ನು ಪ್ರಸನ್ನಗೊಳಿಸಿಕೊಂಡನು.


ಸುಂದರಕಾಂಡ/೫೦

ಹನುಮಂತನನ್ನು ಹಿಡಿದು ರಾವಣನ ಸಭೆಗೆ ತಂದನಂತರ ಆತನನ್ನು
ಕಂಡು ರಾವಣನು ಬಹಳ ಕುಪಿತನಾದನು. ಅವನ ಮನಸ್ಸು ಶಂಕೆಗೆ ಒಳಗಾಗಿತ್ತು.
ಆತನು ಈ ತೇಜಸ್ಸುಳ್ಳ ವಾನರಾಧಿಪನ ಬಗ್ಗೆ ಆಲೋಚಿಸತೊಡಗಿದನು:
ಕಿಮೇಷ ಭಗವಾನ್ನಂದೀ ಭವೇತ್ಸಾಕ್ಷಾದಿಹಾಗತಃ ‖೨‖
ಯೇನ ಶಪೋsಸ್ಮಿ ಕೈಲಾಸೇ ಮಯಾ ಪ್ರಹಸಿತೇ ಪುರಾ |
ಸೊsಯಂ ವಾನರಮೂರ್ತಿಃ ಸ್ಯಾತ್ಕಿಂ ಸ್ವಿದ್ಬಾಣೋsಪಿ ವಾಸುರಃ ‖೩‖


“ಇದೇನು? ಭಗವಾನ್ ನಂದಿಯೇ ಇಲ್ಲಿ ಪ್ರತ್ಯಕ್ಷನಾಗಿ ಬಂದಿರುವನೋ?
ಹಿಂದೆ ನಾನು ಕೈಲಾಸಪರ್ವತಕ್ಕೆ ಹೋದಾಗ ಆತನನ್ನು ಕಂಡು ಹಾಸ್ಯ ಮಾಡಿದ್ದೆ;
ಆಗ ಆತನು 'ನನ್ನ ಹಾಗೆ ಮುಖವುಳ್ಳವರಿಂದ ನಿನ್ನ ನಾಶವಾಗುವದು' ಎಂಬ
ಶಾಪವನ್ನು ಉಸುರಿದ್ದನು. ನಂದಿಯಿಂದ ಕಳಿಸಲ್ಪಟ್ಟ ಬಾಣಾಸುರನೇ ವಾನರ
ರೂಪವನ್ನು ತಾಳಿ ಇಲ್ಲಿ ಬಂದಿರುವನೋ?” ಎಂದು ರಾವಣನ ಜ್ಞಾಪಕಕ್ಕೆ
ಬಂದಿತು.