ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೬೬

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ನುಡಿಗಳಿಂದ ಇಕ್ಷ್ವಾಕುಕುಲವನ್ನು ನೀನು ಅವಮಾನಗೊಳಿಸಿರುವೆ; ಆದ್ದರಿಂದ ನಾನು ನಿನಗೆ ಈ ಸಂಗತಿಯನ್ನು ಹೇಳಿಡುತ್ತೇನೆ-

            ಯದಿ ದತ್ತಂ ಯದಿ ಹುತಂ ಯದಿ ಮೇ ಸುಕೃತಂ ತಪಃ |
            ಯದಿ ಗುಪ್ತಾಃ ಪ್ರಜಾಃ ಸಮ್ಯಕ್ತದಾ ಸತ್ಯಂ ವಚೋಸ್ತು ಮೇ ‖೨೯‖
            ಉತ್ಪತ್ಸ್ಯತೇ ಕುಲೇ ಹ್ಯಸ್ಮಿನ್ನಿಕ್ಷ್ವಾಕೂಣಾಂ ಮಹಾತ್ಮನಾಮ್ |
            ರಾಮೋ ದಾಶರಥಿರ್ನಾಮ ಸ ತೇ ಪ್ರಾಣಾನ್ಹರಿಷ್ಯತಿ ‖೩೦‖

"ನಾನು ದಾನ ಮಾಡಿದ್ದರೆ, ಹವನ ಮಾಡಿದ್ದರೆ, ಒಳ್ಳೆಯ ತಪಸ್ಸನ್ನಾ ಚರಿಸಿದ್ದರೆ ಪ್ರಜೆಗಳ ಪರಿಪಾಲನೆಯನ್ನು ಉತ್ತಮವಾಗಿ ಮಾಡಿದ್ದರೆ, ನನ್ನ ಈ ನುಡಿಗಳು ಸತ್ಯವಾಗುವುವು. ಮಹಾತ್ಮನಾದ ಇಕ್ಷ್ವಾಕುವಿನ ಈ ಕುಲದಲ್ಲಿ ದಶರಥನ ಪುತ್ರನಾಗಿ ರಾಮನೆಂಬುವನು ಜನ್ಮತಾಳುವನು ಮತ್ತು ಆತನು ನಿನ್ನ ಪ್ರಾಣ ಹರಣವನ್ನು ಮಾಡುವನು."

ಯುದ್ಧಕಾಂಡ/೬೦

ರಾಮನ ಬಾಣಗಳಿಂದ ಭಯಗೊಂಡ ರಾವಣನಿಗೆ ಬ್ರಹ್ಮದೇವನಿಂದ ಪಡೆದ ವರಗಳ ನೆನಪಾಯಿತು. ಆತನು ದೇವ, ದಾನವ, ಯಕ್ಷ, ರಾಕ್ಷಸ, ಪನ್ನಗರಿಂದ ತನ್ನ ವಧೆಯು ಸಾಧ್ಯವಾಗಬಾರದೆಂದು ಬೇಡಿಕೊಂಡಿದ್ದನು. ರಾವಣನಿಗೆ ಮಾನವರ ಗಣನೆಯೇ ಇರಲಿಲ್ಲ. ಮಾನವರನ್ನು ಜಯಿಸುವದು ಸಹಜಸಾಧ್ಯವೆಂಬ ನಂಬಿಕೆ ಆತನದಿತ್ತು; ಆದ್ದರಿಂದ ವರವನ್ನು ಬೇಡುವಾಗ ಆತನು ಮಾನವನ ಉಲ್ಲೇಖವನ್ನು ಮಾಡಿರಲಿಲ್ಲ. ಆಗ ಬ್ರಹ್ಮದೇವನು "ಮಾನವರಿಂದ ನಿನಗೆ ಭಯವಿದೆ ಎಂಬುದನ್ನು ಗಮನದಲ್ಲಿ ಇಟ್ಟುಕೋ!" ಎಂದು ರಾವಣನಿಗೆ ಸ್ಪಷ್ಟವಾಗಿ ಹೇಳಿದ್ದನು. "ಮಹೇಂದ್ರ ಸಮನಾದ ನನ್ನನ್ನು ಈ ಮಾನವನು ಸೋಲಿಸಿದ್ದಾನೆ; ನಾನು ಆಚರಿಸಿದ ಉಗ್ರ ತಪಸ್ಸು ವ್ಯರ್ಥವಾಯಿತು!” ಎಂಬ ದುಃಖವು ರಾವಣನಿಗಾಯಿತು, ದಶರಥ ಪುತ್ರನಾದ ರಾಮನಿಂದ ತನಗೆ ಭಯವಿದೆ ಎಂಬುದರ ಮನವರಿಕೆಯಾಯಿತು. ವೇದವತಿ, ಉಮೆ, ರಂಭೆ, ನಂದಿಕೇಶ್ವರ, ವರುಣಕನ್ಯೆಯರ ವಚನಗಳು ಜ್ಞಾಪಕಕೆ ಬಂದವು. ಹಿಂದೆ ಇಕ್ಷ್ವಾಕು ಕುಲೋತ್ಪನ್ನ ಅನರಣ್ಯನು ಕೊಟ್ಟ ಶಾಪದ ಸ್ಮರಣೆಯೂ ಆಯಿತು.

            ಉತ್ಪತ್ಸ್ಯತಿ ಹಿ ಮದ್ವಂಶೆ ಪುರುಷೋ ರಾಕ್ಷಸಾಧಮ |
            ಯಸ್ತ್ವಾಂ ಸಪುತ್ರಂ ಸಾಮಾತ್ಯಂ ಸಬಲಂ ಸಾಶ್ವಸಾರಥಿಯಮ್ ‖೯‖
            ನಿಹನಿಷ್ಯತಿ ಸಂಗ್ರಾಮೇ ತ್ವಾಂ ಕುಲಾಧಮ ದುರ್ಮತೇ ‖೧೦‖