ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶಾಪವಾಣಿ

೧೬೭


"ಎಲೈ ರಾಕ್ಷಸಾಧಮನೇ, ಹೇ ಕುಲಾಧಮನೇ, ಹೇ ದುರ್ಮತಿಯೇ, ನನ್ನ ಕುಲದಲ್ಲಿ ಒಬ್ಬ ಪುರುಷನು ಜನ್ಮತಾಳುವನು. ಆತನು ರಣರಂಗದಲ್ಲಿ, ನಿನ್ನ ಪುತ್ರ, ಅಮಾತ್ಯ, ಸೈನ್ಯ. ಅಶ್ವ ಮತ್ತು ಸಾರಥಿ ಇವರೆಲ್ಲರೊಡನೆ ನಿನ್ನನ್ನು ವಧಿಸುವನು" ಎಂಬ ಶಾಪವನ್ನು ಅನರಣ್ಯನು ಕೊಟ್ಟಿದ್ದನು.
ಅನರಣ್ಯನ ಉದ್ಗಾರದಲ್ಲಿ ಶಪಥ-ಸತ್ಯಕ್ರಿಯೆ ಮತ್ತು ಶಾಪ ಇವೆಲ್ಲವುಗಳ ಅಂತರ್ಭಾವವಿದೆ. ಉದ್ಗಾರದಲ್ಲಿಯ ಮೊದಲಿನ ಭಾಗವು (ಉತ್ತರಕಾಂಡ ೧೯/೨೯) ಶಪಥವು ಸತ್ಯಕ್ರಿಯೆ (ಯುದ್ಧಕಾಂಡ ೬೦/೯-೧೦ ಮತ್ತು ಉತ್ತರಕಾಂಡ ೧೯/೩೦), ಶೇಷ ಭಾಗವು ಶಾಪವಾಗಿದೆ.

೪೫. (ಅನೇಕ) ಪತಿವ್ರತೆಯರು < ರಾವಣ

ಉತ್ತರಕಾಂಡ/೨೪

ಅನೇಕ ಪತಿವ್ರತೆಯರು ರಾವಣನಿಗೆ ಕೊಟ್ಟ ಶಾಪಗಳ ಮಾಹಿತಿಯನ್ನು ಅಗಸ್ತ್ಯ ಮುನಿಯು ರಾಮನಿಗೆ ಹೇಳುತ್ತಿದ್ದಾನೆ:
ದೇವ, ದಾನವ, ರಾಜರ್ಷಿ, ರಾಕ್ಷಸ, ಯಕ್ಷ, ಅಸುರ, ಮಾನವ ಮೊದಲಾದವರ ಸುಂದರ ಸ್ತ್ರೀಯರು ಕಣ್ಣಿಗೆ ಬೀಳುತ್ತಲೇ ಅವರ ಆಪ್ತಬಾಂಧವರನ್ನು ಕೊಂದು ರಾವಣನು ಅವರನ್ನು ತನ್ನ ವಿಮಾನದಲ್ಲಿ ಸೆರೆಯಲ್ಲಿಡಲಾರಂಭಿಸಿದನು. ಹೀಗೆ ಅನೇಕ ಸ್ತ್ರೀಯರನ್ನು ಬಂಧನದಲ್ಲಿಟ್ಟನು. ಆ ಸ್ತ್ರೀಯರು ಪರಮದುಃಖಿತರಾಗಿದ್ದರು. ಆಪ್ತೇಷ್ಟರ ವಧೆಯಾದ್ದರಿಂದ ಚಿಂತೆಗೊಳಗಾಗಿದ್ದರು. ರಾವಣನ ಬಗ್ಗೆ ಅವರಿಗೆ ತುಂಬ ಭಯವೆನ್ನಿಸುತ್ತಿತ್ತು. ತಮ್ಮ ವಿಧಿಯನ್ನು ದೂಷಿಸುತ್ತ ಅವರು ಹೇಗೋ ಬಾಳುತ್ತಿದ್ದರು. ತಮ್ಮ ದುಃಖಕ್ಕೆ ಕೊನೆಯೇ ಇಲ್ಲವೆಂದುಕೊಂಡಿದ್ದರು. ಪರಸ್ತ್ರೀಯರನ್ನು ಬಲಾತ್ಕರಿಸುವ ರಾವಣನ ಕೃತಿಯಿಂದ ಅವರು ಕ್ರೋಧಯುಕ್ತರಾಗಿದ್ದರು.

            ಯಸ್ಮಾದೇಷ ಪರಕ್ಯಾಸು ರಮತೇ ರಾಕ್ಷಸಾಧಮಃ ‖೨೦‖
            ತಸ್ಮಾದ್ವೈ ಸ್ತ್ರೀಕೃತೇನೈವ ವಧಂ ಪ್ರಾಪ್ಸ್ಯತಿ ದುರ್ಮತಿಃ ‖೨೧‖


"ಈ ರಾಕ್ಷಸಾಧಮನು ಪರಸ್ತ್ರೀಯರ ಸಂಗದಲ್ಲಿ ವಿಹರಿಸುತ್ತಿದ್ದಾನೆ; ಆದ್ದರಿಂದ ಓರ್ವ ಸ್ತ್ರೀಯ ಕಾರಣದಿಂದಲೇ ಈ ದುರ್ಬುದ್ಧಿಯ ರಾಕ್ಷಸನ ವಧೆಯಾಗುವದು" ಎಂಬ ಶಾಪವನ್ನು ಆ ಸ್ತ್ರೀಯರು ರಾವಣನಿಗೆ ಕೊಟ್ಟರು.