ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೭೨

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಅಗಸ್ತ್ಯ ಮುನಿಯು ರಾಮನಿಗೆ ಈ ರೀತಿ ಹೇಳುತ್ತಿದ್ದಾನೆ: "ಹೇ ಶತ್ರುನಾಶಕನೆ, ಹನುಮಂತನು ಬಲಶಾಲಿಯಾಗಿದ್ದರೂ ತನ್ನಲ್ಲಿರುವ ಬಲದ ಅರಿವು ಆತನಿಗೆ ಇರಲಾರದು. ಆಡಿದ ಶಾಪವು ಸುಳ್ಳಾಗದಿರುವಂಥ ಮುನಿಗಳಿಂದ ಈ ಶಾಪವು ಹನುಮಂತನಿಗೆ ದೊರಕಿದೆ."
ಇದು ಕೇವಲ ಪುನರುಲ್ಲೇಖವಾಗಿದೆ.

೪೮. ಭೃಗು < ವಿಷ್ಣು

ಉತ್ತರಕಾಂಡ/೫೧

ಹಿಂದೆ ದುರ್ವಾಸಮನಿಯು ಹೇಳಿದ ಒಂದು ಕಥೆಯನ್ನು ಸಾರಥಿಯಾದ ಸುಮಂತ್ರನು ಲಕ್ಷ್ಮಣನಿಗೆ ಹೇಳುತ್ತಿದ್ದಾನೆ:
ಒಮ್ಮೆ ದಶರಥರಾಜನು ವಸಿಷ್ಠ ಮುನಿಯ ಆಶ್ರಮಕ್ಕೆ ಹೋಗಿದ್ದನು. ಅಲ್ಲಿ ದುರ್ವಾಸ ಋಷಿಯ ದರ್ಶನವಾಯಿತು. ವರ್ಷಾಕಾಲದ ವಾಸಕ್ಕಾಗಿ ದುರ್ವಾಸ ಋಷಿಯು ಅಲ್ಲಿಗೆ ಬಂದಿದ್ದನು. ಆ ಇಬ್ಬರೂ ಋಷಿಗಳನ್ನು ರಾಜನು ಅಭಿವಾದಿಸಿದನು. ಅವರು ಸಹ ರಾಜನಿಗೆ ಯಥೋಚಿತ ಸ್ವಾಗತವನ್ನು ಬಯಸಿದರು. ದಶರಥರಾಜನು ದುರ್ವಾಸ ಋಷಿಯನ್ನು ಕುರಿತು ಈ ರೀತಿ ಪ್ರಶ್ನಿಸಿದನು: "ನಮ್ಮ ವಂಶವು ಎಷ್ಟು ಕಾಲದವರೆಗೆ ನಡೆಯುವದು? ರಾಮನ ಆಯುಸ್ಸು ಎಷ್ಟಿದೆ? ಇತರ ಪುತ್ರರ ಆಯುರ್ಮರ್ಯಾದೆ ಎಷ್ಟೆಷ್ಟಿದೆ? ರಾಮನ ಮಕ್ಕಳು ಎಷ್ಟು ಕಾಲ ಜೀವಿಸುವರು? ಈ ಬಗ್ಗೆ ಹೇಳಬೇಕು" ಎಂದು ಪ್ರಾರ್ಥಿಸಿಕೊಂಡನು. ಆಗ ದುರ್ವಾಸನು ಪೂರ್ವವೃತ್ತಾಂತವನ್ನು ಹೇಳಿದನು:
ದೇವ, ದೈತ್ಯರಲ್ಲಿ ಯುದ್ಧ ನಡೆದಾಗ ದೇವತೆಗಳು ದೈತ್ಯರನ್ನು ಹೀಯಾಳಿಸ ಹತ್ತಿದರು. ಆಗ ದೈತ್ಯರು ಭೃಗುಪತ್ನಿಯ ಆಶ್ರಯವನ್ನು ಪಡೆದರು. ಅವಳು ದೈತ್ಯರಿಗೆ ಅನುಭವವನ್ನಿತ್ತಳು. ದೈತ್ಯರು ಆಕೆಯ ರಕ್ಷಣೆಯಲ್ಲಿರುವುದನ್ನು ಕಂಡು ವಿಷ್ಣುವಿಗೆ ರೇಗಿತು. ಆತನು ತನ್ನ ಚಕ್ರದಿಂದ ಭೃಗುಪತ್ನಿಯ ಶಿರವನ್ನು ಹಾರಿಸಿದನು. ಪತ್ನಿಯ ವಧೆಯಾಗಿದ್ದನ್ನು ಕಂಡು ಭೃಗುವು ಅತ್ಯಂತ ಕ್ರೋಧಾವಿಷ್ಟನಾದನು.

            ಶಶಾಪ ಸಹಸಾ ಕ್ರುದ್ಧೋ ವಿಷ್ಣುಂ ರಿಪುಕುಲಾರ್ದನಮ್ ‖೧೪‖
            ಯಸ್ಮಾದವಧ್ಯಾಂ ಮೇ ಪತ್ನೀಂ ಅವಧೀಃ ಕ್ರೋಧಮೂರ್ಚ್ಛಿತಃ |
            ತಸ್ಮಾತ್ತ್ವಂ ಮಾನುಷೇ ಲೋಕೇ ಜನಯಿಷ್ಯಸಿ ಜನಾರ್ದನ ‖೧೫‖
            ತತ್ರ ಪತ್ನೀವಿಯೋಗಂ ತ್ವಂ ಪ್ರಾಪ್ಸ್ಯಸೇ ಬಹುವಾರ್ಷಿಕಮ್ ‖೧೬‖