ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೭೪

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


'ನೃಗ'ನೆಂಬ ರಾಜನಿದ್ದನು. ಒಮ್ಮೆ ಪುಷ್ಕರತೀರ್ಥದಲ್ಲಿ ಸುವರ್ಣಭೂಷಿತ ಕೋಟ್ಯಾವಧಿ ಹಸುಗಳನ್ನು ಅವುಗಳ ಕರುಗಳ ಜೊತೆಗೆ ಆತನು ಬ್ರಾಹ್ಮಣರಿಗೆ ದಾನವಾಗಿ ಕೊಟ್ಟನು. ಅದೇ ಸಮಯದಲ್ಲಿ ಹೊಲದಲ್ಲಿ ಭೂಮಿಗೆ ಬಿದ್ದ ಧಾನ್ಯ-ಕಣಗಳನ್ನು ಮೇಯ್ದು ಜೀವಿಸುವ ಒಂದು ಹಸುವು ಒಬ್ಬ ಬಡಬ್ರಾಹ್ಮಣದಾಗಿತ್ತು; ಈ ಹಸುವು ಆ ದಾನ ಕೊಡಲಿದ್ದ ಕೋಟ್ಯಾವಧಿ ಹಸುಗಳ ಮಂದೆಯನ್ನು ಸೇರಿಕೊಂಡಿತ್ತು; ರಾಜನು ಇದನ್ನು ಅರಿಯದೇ ಈ ಹಸುವನ್ನೂ ಒಬ್ಬ ಬ್ರಾಹ್ಮಣನಿಗೆ ದಾನವಾಗಿ ಕೊಟ್ಟನು. ತನ್ನ ಕಳೆದುಕೊಂಡ ಹಸುವನ್ನು ಆ ಬಡಬ್ರಾಹ್ಮಣನು ಎಲ್ಲೆಡೆಯಲ್ಲಿಯೂ ಹುಡುಕಿದನು. ಸಾಕಷ್ಟು ಸಮಯವು ಕಳೆಯಿತು. ಇದೇ ರೀತಿ ಶೋಧಾರ್ಥವಾಗಿ ಅಲೆಯುತ್ತ ಬ್ರಾಹ್ಮಣನು ಕನಖಲ ತೀರ್ಥಕ್ಕೆ ಹೋದನು. ಅಲ್ಲಿ ತನ್ನ ಹಸು ಕರುವಿನೊಂದಿಗೆ ಬೇರೊಬ್ಬ ಬ್ರಾಹ್ಮಣನ ಬಳಿ ಇರುವುದನ್ನು ಕಂಡನು.
"ಶಬಲೆ! ಇಲ್ಲಿ ಬಾ!" ಎಂದು ಕರೆದ ಕ್ಷಣವೇ ಆ ಹಸು ಧ್ವನಿಯನ್ನು ಗುರುತಿಸಿ ಈ ಬಡಬ್ರಾಹ್ಮಣನ ಬಳಿ ಬಂದಿತು. ಆಗ ಈ ಹಸುವನ್ನು ದಾನವಾಗಿ ಪಡೆದ ಬ್ರಾಹ್ಮಣನು "ರಾಜನಿಂದ ಇದು ದಾನವಾಗಿ ದೊರೆತಿದೆ" ಎಂದು ತಿಳಿಸಿದನು. ಆ ಇಬ್ಬರಲ್ಲಿ ಬಹಳ ಸಮಯದವರೆಗೆ ವಾದ ನಡೆಯಿತು. ಇಬ್ಬರೂ ತಮ್ಮ ತಮ್ಮ ಹೇಳಿಕೆಗಳನ್ನು ಪ್ರತಿಪಾದಿಸಹತ್ತಿದರು. ಕೊನೆಗೆ ರಾಜನನ್ನು ಸಮಕ್ಷಮ ಕಂಡು ತೀರ್ಮಾನಿಸಬೇಕೆಂದು ನಿಶ್ಚಯಿಸಿದರು. ಗೋಪ್ರದಾನಮಾಡಿದ ರಾಜನ ಬಳಿ ಇಬ್ಬರೂ ಹೋದಾಗ ರಾಜನ ಭೇಟಿಯೇ ಆಗಲಿಲ್ಲ. ದೀರ್ಘಸಮಯದವರೆಗೆ ಅವರು ರಾಜದ್ವಾರದಲ್ಲಿ ಕಾಯ್ದು ಕುಳಿತಿರಬೇಕಾಯಿತು. ಆಗ ಸಿಟ್ಟಾಗಿ ಅವರು ಈ ರೀತಿ ಉದ್ಗರಿಸಿದರು-

            ಅರ್ಥಿನಾಂ ಕಾರ್ಯಸಿದ್ಧ್ಯರ್ಥಂ ಯಸ್ಮಾತ್ತ್ವಂ ನೈಷಿ ದರ್ಶನಮ್ ‖೧೮‖
            ಅದೃಶ್ಯಃ ಸರ್ವಭೂತಾನಾಂ ಕೃಕಲಾಸೋ ಭವಿಷ್ಯಸಿ |
            ಬಹುವರ್ಷಸಹಸ್ರಾಣಿ ಬಹುವರ್ಷಶತಾನಿ ಚ ‖೧೯‖
            ಶ್ವಭ್ರೇ ತ್ವಂ ಕೃಕಲೀಭೂತೋ ದೀರ್ಘಖಾಲಂ ನಿವತ್ಸ್ಯಸಿ |
            ಉತ್ಪತ್ಸ್ಯತೇ ಹಿ ಲೋಕೇsಸ್ಮಿನ್ಯದೂನಾಂ ಕೀರ್ತಿವರ್ಧನಃ ‖೨೦‖
            ವಾಸುದೇವ ಇತಿ ಖ್ಯಾತೋ ವಿಷ್ಣುಃ ಪುರುಷವಿಗ್ರಹಃ |
            ಸ ತೇ ಮೋಕ್ಷಯಿತಾ ಶಾಪಾದ್ರಾಜಂಸ್ತಸ್ಮಾದ್ ಭವಿಷ್ಯಸಿ ‖೨೧‖
            ಕೃತಾ ಚ ತೇನ ಕಾಲೇನ ನಿಷ್ಕೃತಿಸ್ತೇ ಭವಿಷ್ಯತಿ ‖೨೨‖