ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೭೬

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಅದೇ ರೀತಿ ಅತ್ರಿ, ಅಂಗೀರಸ, ಭೃಗು ಮೊದಲಾದ ಋಷಿಗಳಿಗೂ ಅರ್ಪಿಸಿದನು. ಅದಕ್ಕೆ "ಇಂದ್ರನು ನನಗೆ ಈ ಮೊದಲೇ ಪೌರೋಹಿತ್ಯವನ್ನು ಕೊಟ್ಟಿರುವ ಕಾರಣ ನೀನು ಆತನ ಯಾಗ ಮುಗಿಯುವವರೆಗೆ ಕಾಯಬೇಕು!" ಎಂದು ವಸಿಷ್ಠನು ಹೇಳಿಕಳುಹಿಸಿದನು. ಆಗ ನಿಮಿರಾಜನು ವಸಿಷ್ಠನ ಪೌರೋಹಿತ್ಯವನ್ನು ಗೌತಮನಿಗೆ ಒಪ್ಪಿಸಿ ತಾನು ಹಿಮಾಲಯದ ಬಳಿಯಲ್ಲಿ ತನ್ನ ಯಾಗವನ್ನಾ ರಂಭಿಸಿದನು. ಈ ಯಾಗಕ್ಕಾಗಿ ಐದುಸಾವಿರ ವರ್ಷ ಅವಧಿಯ ದೀಕ್ಷೆಯನ್ನು ತೆಗೆದುಕೊಂಡನು. ಇಂದ್ರನ ಯಾಗವು ಮುಗಿದನಂತರ ವಸಿಷ್ಠ ಋಷಿಯು ರಾಜನ ಯಜ್ಞವನ್ನು ನೆರವೇರಿಸಲು ಬಂದಾಗ ಆ ಸ್ಥಳದಲ್ಲಿ ಗೌತಮನನ್ನು ಕಂಡು ವಸಿಷ್ಠನು ಕೋಪಗೊಂಡನು. ರಾಜನ ಭೇಟಿಗಾಗಿ ಕೆಲವು ಸಮಯ ಕಾಯ್ದನು. ಆ ದಿನ ರಾಜನು ವಿಪರೀತ ನಿದ್ರೆಯಲ್ಲಿದ್ದನು. ಭೇಟಿಯಾಗಲಿಲ್ಲವಾದ್ದರಿಂದ ವಸಿಷ್ಠನಿಗೆ ಇನ್ನೆಷ್ಟು ರೇಗಿತು- ಆತನು ಈ ರೀತಿ ಉಚ್ಚರಿಸಿದನು:

            ಯಸ್ಮಾತ್ತ್ವಮನ್ಯಂ ವ್ರತವಾನ್ಮಾಮವಜ್ಞಾಯ ಪಾರ್ಥಿವ |
            ಚೇತನೇನ ವಿನಾಭೂತೋ ದೇಹಸ್ತೇ ಪಾರ್ಥಿವೈಷ್ಯತಿ ‖೧೭‖


"ಎಲೈ ರಾಜನೇ, ನನ್ನನ್ನು ಕಡೆಗಣಿಸಿ ನೀನು ಬೇರೆ ಪುರೋಹಿತನನ್ನು ಕಂಡುಕೊಂಡಿರುವೆ; ಅದಕ್ಕಾಗಿ ನಿನ್ನ ದೇಹವು ಅಚೇತನವಾಗಲಿ!"
ನಿದ್ರೆಯಿಂದ ಎಚ್ಚತ್ತಾಗ ವಸಿಷ್ಠನ ಶಾಪವು ನಿಮಿರಾಜನಿಗೆ ತಿಳಿಯಿತು. ಆತನು ಕೋಪದಿಂದ ಉರಿದೆದ್ದನು. ವಸಿಷ್ಠನಿಗೆ ಪ್ರತಿಶಾಪವನ್ನು ಕೊಟ್ಟನು. ಹೀಗಾಗಿ ಇಬ್ಬರೂ ತಮ್ಮ ಸ್ಥೂಲದೇಹಗಳನ್ನು ಕಳೆದುಕೊಂಡರು.
ನಿಮಿರಾಜ < ವಸಿಷ್ಠ ಶಾಪ ಕ್ರ. ೫೧ ನೋಡಿರಿ.

೫೧. ನಿಮಿರಾಜ < ವಸಿಷ್ಠ

ಉತ್ತರಕಾಂಡ/೫೫

ವಸಿಷ್ಠ < ನಿಮಿರಾಜ ಶಾಪ ಕ್ರ. ೫೦
ನಿದ್ರೆಯಿಂದ ಎಚ್ಚತ್ತಾಗ ವಸಿಷ್ಠನ ಶಾಪದಿಂದ ಕೋಪಗೊಂಡ ನಿಮಿರಾಜನು ವಸಿಷ್ಠನಿಗೆ ಪ್ರತಿಶಾಪವನ್ನಿತ್ತನು:

            ಅಜಾನತಃ ಶಯಾನಸ್ಯ ಕ್ರೋಧೇನ ಕಲುಷೀಕೃತಃ |
            ಉಕ್ತವಾನ್ ಮಮ ಶಾಪಾಗ್ನಿಂ ಯಮದಂಡಮಿವಾಷರಮ್ ‖೧೯‖