ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾಪವಾಣಿ

೧೭೭

            ತಸ್ಮಾತ್ತವಾಪಿ ಬ್ರಹ್ಮರ್ಷೇ ಚೇತನೇನ ವಿನಾಕೃತಃ
            ದೇಹಃ ಸ ಸುಚಿರಪ್ರಖ್ಯೋ ಭವಿಷ್ಯತಿ ನ ಸಂಶಯಃ ‖೨೦‖


"ನೀವು ಬಂದಿರುವದು ನನಗೆ ಗೊತ್ತಿರದೆ, ನಾನು ನಿದ್ರಾವಶನಿದ್ದ ಸಮಯದಲ್ಲಿ, ಕ್ರೋಧವಶರಾಗಿ ನೀವು ಪ್ರತಿಯಮದಂಡದಂತಿರುವ ಶಾಪಾಗ್ನಿಯನ್ನು ನನ್ನ ಮೇಲೆ ಬಿಟ್ಟಿದ್ದೀರಿ; ಅದಕ್ಕಾಗಿ ಹೇ ಬ್ರಹ್ಮರ್ಷಿ, ನಿಮ್ಮ ಅತಿಮನೋಹರವಾದ ದೇಹವು ನಿಃಸಂಶಯವಾಗಿ ಅಚೇತನಗೊಳ್ಳಲಿ!"
ನೃಪಶ್ರೇಷ್ಠನು ಮತ್ತು ದ್ವಿಜಶ್ರೇಷ್ಠನು ಒಬ್ಬರಿಗೊಬ್ಬರು ಶಪಿಸಿದ ಕಾರಣ ಅವರು ಇಬ್ಬರೂ ಸ್ಥೂಲದೆಹವಿರಹಿತರಾದರು.
ಈ ಎರಡು ಶಾಪಗಳು ಇನ್ನಿತರ ಶಾಪಗಳಂತೆ ಇಲ್ಲ. ಶಾಪಕ್ಕೆ ಸರಿಯಾಗಿ ಪ್ರತಿಶಾಪವಿದೆ; ಆ ಪ್ರತಿಶಾಪವು ಶಾಪಕ್ಕೆ ಸಮನಾಗಿ ಇದೆ. ಈ ರೀತಿಯ ಉದಾಹರಣೆಯು ವಾಲ್ಮೀಕಿರಾಮಾಯಣದಲ್ಲಿ ಇದೊಂದೇ ಆಗಿದೆ. ವಸಿಷ್ಠನು ಸೌದಾಸರಾಜನಿಗೆ ಶಾಪ ಕೊಟ್ಟಾಗ (ಉತ್ತರಕಾಂಡ/೬೫) ಸೌದಾಸರಾಜನು ಶಾಪ ಕೊಡಲುದ್ಯುಕ್ತನಾಗಿ ಕೈಯಲ್ಲಿ ಉದಕವನ್ನು ಸಹ ಹಿಡಿದಿದ್ದನು. "ಪುರೋಹಿತನಿಗೆ ಶಾಪಕೊಡುವದು ಸೂಕ್ತವಲ್ಲ" ಎಂದು ಸೌದಾಸನ ಪತ್ನಿಯು ಉಪದೇಶಿಸಿದ್ದರಿಂದ ನಿಜದಲ್ಲಿ ಸೌದಾಸನು ಶಾಪವನ್ನು ಕೊಡಲಿಲ್ಲ. ಹೀಗಾದ್ದರಿಂದ ವಸಿಷ್ಠ < ನಿಮಿರಾಜ ಮತ್ತು ನಿಮಿರಾಜ < ವಸಿಷ್ಠ ಇವರ ಶಾಪ-ಪ್ರತಿಶಾಪ ಇವುಗಳ ಒಂದೇ ಉದಾಹರಣೆ ಕಂಡುಬರುತ್ತದೆ.

೫೨. ಮಿತ್ರ < ಊರ್ವಶೀ

ಉತ್ತರಕಾಂಡ/೫೬

ವಸಿಷ್ಠ ಮತ್ತು ನಿಮಿರಾಜ ಇವರು ಪರಸ್ಪರರಿಗೆ ಶಾಪಕೊಟ್ಟು ದೇಹವಿಲ್ಲದಂತಾದರು. ಅವರಿಗೆ ಪುನಃ ದೇಹಪ್ರಾಪ್ತಿ ಹೇಗಾಯಿತು? ಎಂದು ಲಕ್ಷ್ಮಣನು ಕೇಳಿದನು. ರಾಮನು ಅದಕ್ಕೆ ಉತ್ತರಿಸುತ್ತಾನೆ:
ದೇಹವಿಲ್ಲದ ಅವರಿಬ್ಬರೂ ವಾಯುರೂಪವನ್ನು ಹೊಂದಿ ಸ್ವಯಂಭೂ ಆದ ಬ್ರಹ್ಮನ ಬಳಿ ಹೋದರು. ನಮಸ್ಕರಿಸಿ ವಸಿಷ್ಠನು ಈ ರೀತಿ ಎಂದನು: "ದೇಹವಿರದೇ ಇದ್ದ ಕಾರಣ ಕಾರ್ಯಲೋಪವಾಗುತ್ತಿದೆ; ಆದ್ದರಿಂದ ನನಗೆ ಎರಡನೇ ದೇಹವು ಲಭಿಸುವಂತೆ ಕರುಣಿಸಿರಿ." ಆಗ ಬ್ರಹ್ಮದೇವನು "ಎಳೈ ಮಹಾಕೀರ್ತಿವಂತನಾದ ವಸಿಷ್ಠನೇ, ಮಿತ್ರ ವರುಣರ ತೇಜಸ್ಸಿನಲ್ಲಿ ನೀನು