ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೭೮

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಪ್ರವೇಶಿಸು! ನೀನು ಅಲ್ಲಿಯೂ ಅಯೋನಿಸಂಭವನಾಗುವೆ." ಇದನ್ನು ಕೇಳಿ ವಸಿಷ್ಠನು ಬ್ರಹ್ಮದೇವನಿಗೆ ಪ್ರದಕ್ಷಿಣೆ ಹಾಕಿ ವರುಣಲೋಕಕ್ಕೆ ಹೋದನು.
ಅದೇ ಸಮಯಕ್ಕೆ ಮಿತ್ರನು ಕ್ಷೀರಸಾಗರಸ್ವರೂಪ ವರುಣರೂಪವನ್ನು ಹೊಂದಿ ದೇವತೆಗಳಿಗೂ ಪ್ರಿಯನಾಗಿದ್ದನು. ಅವನು ವರುಣನ ಅಧಿಕಾರವನ್ನು ನಡೆಯಿಸುತ್ತಿದ್ದನು. ಒಮ್ಮೆ 'ಉರ್ವಸಿ' ಎಂಬ ಅಪ್ಸರೆಯು ಗೆಳತಿಯರೊಡನೆ ಅಲ್ಲಿಗೆ ಬಂದಳು. ಅವಳನ್ನು ವೀಕ್ಷಿಸಿ ವರುಣನಿಗೆ ಪರಮಾನಂದವಾಯಿತು. ಆತನ ಕಾಮವಾಸನೆಯು ಉದ್ದೀಪಿತವಾಗಿ ಅವನು ಊರ್ವಸಿಯೊಡನೆ ರತಿಕ್ರೀಡೆಯನ್ನು ಬಯಸಿದನು. ಆಗ ಉರ್ವಸಿಯು "ನಾನು ಮಿತ್ರನ ಬೇಡಿಕೆಯನ್ನು ಈ ಮೊದಲೇ ಒಪ್ಪಿಕೊಂಡಿದ್ದೇನೆ" ಎಂದು ವಿನಯದಿಂದ ಹೇಳಿದಳು. ಆಗ ವರುಣನು "ನನ್ನೊಡನೆ ಸಮಾಗಮ ಮಾಡುವ ಇಚ್ಛೆಯು ನಿನಗಿರದಿದ್ದರೆ ನಿನಗಾಗಿ ಉತ್ಸರ್ಗ ಮಾಡಿದ ತೇಜಸ್ಸನ್ನು ಕುಂಭದಲ್ಲಿ ಹಾಕುತ್ತೆನೆ" ಎಂದನು.
ಉರ್ವಸಿಯು ಅದಕ್ಕೆ ಒಪ್ಪಿಕೊಂಡಳು. ವರುಣನು ಆಕೆಯನ್ನು ಪ್ರೀತಿಸುತ್ತಿದ್ದನು. ಆಕೆಯು ವರುಣನನ್ನು ಪ್ರೀತಿಸುತ್ತಿದ್ದರೂ ಆಗ ಅವಳ ದೇಹವು ಮಿತ್ರನ ಅಂಕಿತದಲ್ಲಿತ್ತು. ಹೀಗಾಗಿ ವರುಣನು ತನ್ನ ತೇಜಸ್ಸನ್ನು ಕುಂಭಕ್ಕೆ ಹಾಕಿದನು. ಊರ್ವಸಿಯು ಆ ನಂತರ ಮಿತ್ರನ ಬಳಿಗೆ ಹೋದಳು. ಆಗ ಅವನು ಕೋಪಗೊಂಡು ಈ ರೀತಿ ಅಂದನು.

            ಮಯಾಭಿಮಂತ್ರಿತಾ ಪೂರ್ವಂ ಕಸ್ಮಾತ್ತ್ವಮವಸರ್ಜತಾ |
            ಪತಿಮನ್ಯಂ ವೃತವತೀ ಕಿಮರ್ಥಂ ದುಷ್ಟಚಾರಿಣೀ ‖೨೩‖
            ಅನೇನ ದುಷ್ಕೃತೇನ ತ್ವಂ ಮತ್ಕ್ರೋಧಕಲುಷೀಕೃತಾ |
            ಮನುಷ್ಯಲೋಕಮಾಸ್ಥಾಯ ಕಂಚಿತ್ಕಾಲಂ ನಿವತ್ಸ್ಯಸಿ ‖೨೪‖
            ಬುಧಸ್ಯ ಪುತ್ರೋರಾಜರ್ಷಿಃ ಕಾಶೀರಾಜಃ ಪುರೂರವಾಃ |
            ತಮಭ್ಯುಗಚ್ಛ ದುರ್ಬುದ್ಧೇ ಸ ತೇ ಭರ್ತಾ ಭವಿಷ್ಯತಿ ‖೨೫‖


"ಹೇ ದುರಾಚಾರಿಣಿ, ನಾನು ನಿನ್ನನ್ನು ಮೊದಲೇ ಆಹ್ವಾನಿಸಿದ್ದರೂ ನೀನು ನನ್ನನ್ನು ಹೇಗೆ ತ್ಯಜಿಸಿದೆ? ಅನ್ಯಪತಿಯನ್ನು ಹೇಗೆ ಸ್ವೀಕರಿಸಿದೆ? ಈ ಪಾತಕದಿಂದ ನೀನು ನನ್ನ ಕೋಪಕ್ಕೆ ಬಲಿಯಾಗುವೆ. ಮನುಷ್ಯಲೋಕದಲ್ಲಿ ನೀನು ಕೆಲವು ಕಾಲ ವಾಸವಾಗುವೆ. ರಾಜರ್ಷಿಯಾದ ಬುಧಪುತ್ರ ಕಾಶಿರಾಜನಾದ ಪುರೂರವನ ಬಳಿ ನೀನು ಹೋಗು! ಅವನು ನಿನ್ನ ಪತಿಯಾಗುವನು."