ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶಾಪವಾಣಿ

೧೮೧


ಸಕಲ ಐಶ್ವರ್ಯಗಳಿಂದ ದೂರವಿರಿಸಿದ್ದೀರಿ; ಆದ್ದರಿಂದ ನಿಮ್ಮ ಪ್ರಿಯಪುತ್ರನಾದ ಪುರುವು ಈ ನಿಮ್ಮ ವೃದ್ಧತ್ವವನ್ನು ಸ್ವೀಕರಿಸಲಿ! ನೀವು ಇಂದಿನವರೆಗೆ ನನಗೆ ಎಂದೂ ಹತ್ತಿರ ಬರಗೊಡಲಿಲ್ಲ. ನೀವು ಪ್ರತಿದಿನ ಯಾರ ಜೊತೆಗೂಡಿ ಭೋಜನವನ್ನು ಮಾಡುತ್ತೀರೋ ಅವರಲ್ಲಿಯ ಒಬ್ಬರು ನಿಮ್ಮ ವೃದ್ಧತ್ವವನ್ನು ಅಂಗೀಕರಿಸಬೇಕು."- ಈ ರೀತಿ ಎಂದನು. ಶರ್ಮಿಷ್ಠೆಯ ಪುತ್ರನಾದ ಪುರುವಿಗೆ ಕೇಳಿದಾಗ ಆತನು ತನ್ನ ತಾರುಣ್ಯವನ್ನು ತಂದೆಗೆ ಅರ್ಪಿಸಿ ಆತನ ವೃದ್ಧತ್ವವನ್ನು ತಾನು ಅಂಗೀಕರಿಸಿದನು. ಯಯಾತಿಯು ಆನಂದಭರಿತನಾದನು. ಆದರೆ ಯದುವಿನ ನುಡಿಗಳಿಂದ ಆತನು ಕೋಪಗೊಂಡಿದ್ದನು; ಯದುವಿಗೆ ಈ ರೀತಿ ಶಪಿಸಿದನು:

            ರಾಕ್ಷಸಸ್ತ್ವಂ ಮಯಾ ಜಾತಃ ಕ್ಷತ್ರರೂಪೋ ದುರಾಸದಃ |
            ಪ್ರತಿಹಂಸಿ ಮಮಾಜ್ಞಾಂ ತ್ವಂ ಪ್ರಜಾರ್ಥೇ ವಿಫಲೋ ಭವ ‖೧೪‖
            ಪಿತರಂ ಗುರುಭೂತಂ ಮಾಂ ಯಸ್ಮಾತ್ತ್ವಮವಮನ್ಯಸೇ |
            ರಾಕ್ಷಸಾನ್ಯಾತುಧಾನಾಂಸ್ತ್ವಂ ಜನಯಿಷ್ಯಸಿ ದಾರುಣಾನ್ ‖೧೫‖
            ನ ತು ಸೋಮಕುಲೋತ್ಪನ್ನೇ ವಂಶೇ ಸ್ಥಾಸ್ಯತಿ ದುರ್ಮತೇಃ |
            ವಂಶೋsಪಿ ಭವತಸ್ತುಲ್ಯೋ ದುರ್ವಿನೀತೋ ಭವಿಷ್ಯತಿ ‖೧೬‖


"ನೀನು, ನನ್ನಿಂದ ಕ್ಷತ್ರಿಯನಾಗಿದ್ದರೂ ಮಹಾಭಯಂಕರ ರಾಕ್ಷಸನಾಗಿ ಹುಟ್ಟಿರುವೆ. ನನ್ನ ಆಜ್ಞೆಯನ್ನು ಮೀರಿದ ಕಾರಣ ಸಂತಾನವಿಫಲನಾಗುವೆ. ಗುರುಸ್ಥಾನದಲ್ಲಿದ್ದ ಪಿತನನ್ನು ನೀನು ಅವಮಾನಿಸಿರುವೆ; ಆದ್ದರಿಂದ ಘೋರ ರಾಕ್ಷಸರನ್ನೂ ಯಾತುಧಾನರನ್ನೂ ನೀನು ನಿರ್ಮಿಸುವೆ. ದುಷ್ಟನಾದ ನಿನ್ನ ಸಂತತಿಯು ಸೋಮವಂಶದಲ್ಲಿ ಜೀವಿಸಿರಲಾರದು. ನಿನ್ನಂತೆಯೇ ನಿನ್ನ ಪೀಳಿಗೆಯೂ ಉದ್ಧಟವಾಗುವದು."
ಈ ರೀತಿ ಶಾಪವನ್ನು ಯದುವಿಗೆ ಕೊಟ್ಟನು; ಪುರುವಿನಿಂದ ತಾರುಣ್ಯವನನ್ನು ಪಡೆದು ಸಾವಿರಾರು ಯಾಗಗಳನ್ನು ಯಯಾತಿಯು ಮಾಡಿದನು. ಆ ನಂತರ ಪುರುವಿನಲ್ಲಿ ಠೇವಣಿಯಾಗಿಟ್ಟಿದ್ದ ವಾರ್ಧಕ್ಯವನ್ನು ತಾನು ಮರಳಿ ಪಡೆದನು. ಪುರುವಿನ ತಾರುಣ್ಯವನ್ನು ಆತನಿಗೆ ಪುನಃ ಕೊಟ್ಟು ಆತನ ರಾಜ್ಯಾಭಿಷೇಕವನ್ನು ಪೂರೈಸಿದನು.