ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೮೨

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


೫೫. ಶ್ವಾನ < ಭಿಕ್ಷು

ಉತ್ತರಕಾಂಡ/ಪ್ರಕ್ಷಿಪ್ತ೨/೫೯/೬೦

ಈ ಸರ್ಗಗಳಲ್ಲಿ, ರಾಮರಾಜ್ಯದ ನಿಃಪಕ್ಷಪಾತನ್ಯಾಯಪದ್ಧತಿಯನ್ನು
ಗೌರವಿಸುವ ಕಥೆಯು ಬಂದಿದೆ.
ವಸಿಷ್ಠ, ಕಶ್ಯಪಾದಿ ಋಷಿಗಳು, ಅಮಾತ್ಯರು, ಧರ್ಮಶಾಸ್ತ್ರಜ್ಞರು, ನೀತಿ
ನಿಪುಣ ಸಭಿಕರು, ರಾಜರು, ಇವರಿಂದ ಅಲಂಕೃತವಾದ ಸಭೆಯಲ್ಲಿ ರಾಮನು
ರಾಜಧರ್ಮವನ್ನು ಅವಲೋಕಿಸುತ್ತಿದ್ದನು. ರಾಜ್ಯಕಾರ್ಯಭಾರವು ಧರ್ಮಾನುಸಾರ
ನಡೆಯುತ್ತಿದ್ದುದರಿಂದ ಯಾರಿಗೂ ಯಾವ ಉಪದ್ರವವಿರಲಿಲ್ಲ. ಯಾರಿಂದಲೂ
ತಕರಾರುಗಳು ಬರುತ್ತಿರಲಿಲ್ಲ. ಹೀಗಿದ್ದರೂ ವಾಡಿಕೆಯಂತೆ ರಾಮನು
ಯಾರಿಂದಾದರೂ ಅರ್ಜಿ ಬಂದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಿದ್ದನು.
ಒಮ್ಮೆ ಒಂದು ನಾಯಿಯು ರಾಜ್ಯಸಭೆಯ ಬಳಿ ಆಕ್ರೋಶವನ್ನು ಮಾಡುತ್ತಿದ್ದುದನ್ನು
ಲಕ್ಷ್ಮಣನು ಕಂಡನು. ಈ ಆಕ್ರೋಶದ ಕಾರಣವೇನೆಂದು ಕೇಳಿದಾಗ ಆ ನಾಯಿಯು
ಹೀಗೆಂದಿತು: “ನಿರ್ಮಲಚರಿತನು, ಭಯಗೊಂಡವರಿಗೆ ಆಶ್ರಯದಾತನು, ಪರಿಸ್ಥಿತಿ
ಗನುಸಾರವಾಗಿ ಅಭಯವನ್ನು ನೀಡುವ ರಾಮನ ಸಮಕ್ಷಮವೇ ನಾನು ಹೇಳ
ಬಯಸುತ್ತೇನೆ.” ಕೂಡಲೇ ಲಕ್ಷ್ಮಣನು ಆ ನಾಯಿಯನ್ನು ಸಭೆಗೆ ಕರೆದೊಯ್ಯುವಾಗ,
ಪುನಃ ಆ ನಾಯಿಯು "ಮೊದಲು ರಾಮನ ಅಪ್ಪಣೆ ಇರದಿದ್ದರೆ ನಾನು ಸಭೆಗೆ
ಬರಲಾರೆ” ಎಂದು ಸ್ಪಷ್ಟವಾಗಿ ನುಡಿಯಿತು. ರಾಮನು ಅಭಯವನ್ನು ಕೊಟ್ಟು
ಪ್ರವೇಶಕ್ಕೆ ಅನುಮತಿಸಿದನು. ಆಗ ತಲೆಗೆ ಗಾಯಗೊಂಡ ಆ ನಾಯಿಯು
ರಾಮನಿಗೆ ಈ ರೀತಿ ಹೇಳಿತು: “ಸಕಲಸಮೃದ್ಧಿಗಳಿದ್ದ ಓರ್ವ ಭಿಕ್ಷು ಒಬ್ಬ ಬ್ರಾಹ್ಮಣನ
ಮನೆಯಲ್ಲಿ ವಾಸವಿದ್ದಾನೆ. ನನ್ನಿಂದ ಯಾವ ಅಪರಾಧ ನಡೆಯದಿದ್ದರೂ ಆ
ಭಿಕ್ಷುವು ನನ್ನನ್ನು ಥಳಿಸಿದ್ದಾನೆ.” ಈ ತಕರಾರನ್ನು ಕೇಳಿಕೊಂಡು ದೂತರಿಂದ ಆ
ಭಿಕ್ಷುವನ್ನು ಕರೆಯಿಸಿದಾಗ, ಆತನು ಈ ರೀತಿ ಹೇಳಿಕೆ ಕೊಟ್ಟನು: “ಭಿಕ್ಷೆ ಬೇಡುವ
ಸಮಯವಿಲ್ಲದಾಗ ನಾನು ಒಮ್ಮೆ ಭಿಕ್ಷೆಗಾಗಿ ತಿರುಗುತ್ತಿದ್ದೆ: ಹಸಿವೆಯಿಂದ ಬಳಲಿದ್ದೆ;
ಆಗ ಈ ನಾಯಿಯು ದಾರಿಗೆ ಅಡ್ಡ ನಿಂತು ನನಗೆ ದಾರಿ ಕೊಡುತ್ತಿರಲಿಲ್ಲ; ಆಗ
ಸಿಟ್ಟು ತಾಳದೇ ನಾನು ಈ ನಾಯಿಗೆ ಹೊಡೆದೆನು. ಹೇ ರಾಜಾಧಿರಾಜನೇ,
ಅಪರಾಧಿಯಾದ ನನಗೆ ಶಾಸನ ದೊರೆಯಲಿ! ಶಾಸನ ಹೊಂದಿದರೆ ನನಗೆ
ನರಕದ ಭಯ ಉಳಿಯಲಾರದು!” ರಾಮನು, ಈ ಭಿಕ್ಷುವಿಗೆ ಯಾವ ಶಿಕ್ಷೆಯನ್ನು
ವಿಧಿಸತಕ್ಕದ್ದು? ಎಂದು ಸಭಿಕರಿಗೆ ಕೇಳಿದನು. ಋಷಿಗಳು, ಧರ್ಮಶಾಸ್ತ್ರಜ್ಞರು,
ಪಂಡಿತರು ಬ್ರಾಹ್ಮಣನಾದ ಭಿಕ್ಷುವಿಗೆ ವಧೆಯ ಶಿಕ್ಷೆಯನ್ನು ಕೊಡಬಾರದೆಂದು