ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೮೬

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


೫೭. ವಸಿಷ್ಠ < ಸೌದಾಸ

ಉತ್ತಕಾಂಡ/೬೫

ವಾಲ್ಮೀಕಿ ಋಷಿಯು ಶತ್ರುಘ್ನನಿಗೆ ಸೌದಾಸರಾಜನ ಕಥೆಯನ್ನು ಹೇಳುತ್ತಿದ್ದಾನೆ:
ರಾಮನು ಹೇಳಿದ ಕಾರ್ಯವನ್ನು ಮಾಡಲೋಸುಗ ಶತ್ರುಘ್ನನು ದಾರಿಯಲ್ಲಿ
ವಾಲ್ಮೀಕಿಯ ಆಶ್ರಮದಲ್ಲಿ ನಿಂತನು. ಋಷಿಯು ಆತನನ್ನು ಯಥೋಚಿತವಾಗಿ
ಬರಮಾಡಿಕೊಂಡನು. ಆಶ್ರಮದ ಬಳಿಯಲ್ಲಿದ್ದ ಯಜ್ಞಸಾಮಗ್ರಿಯನ್ನು ಕಂಡು
ಶತ್ರುಘ್ನನು ಇದೆಲ್ಲ ಯಾರದು? ಎಂದು ಪ್ರಶ್ನಿಸಿದಾಗ ವಾಲ್ಮೀಕಿಯು ಆತನಿಗೆ
ಈ ರೀತಿ ಹೇಳಿದನು: “ಸೌದಾಸನೆಂಬ ರಾಜನು ನಿಮ್ಮ ಪೂರ್ವಜನಾಗಿದ್ದನು.
ಎಳೇ ಪ್ರಾಯದಲ್ಲಿದ್ದಾಗ ಈ ರಾಜನು ಬೇಟೆಯಾಡಲು ಹೋಗಿದ್ದನು. ಅಲ್ಲಿ, ಇಬ್ಬರು
ರಾಕ್ಷಸರು ಹುಲಿಯ ರೂಪವನ್ನು ಧರಿಸಿ ಮೃಗಗಳನ್ನು ಸಂಹರಿಸುತ್ತಿರುವದನ್ನು
ಕಂಡನು. ಈ ರೀತಿ, ಆ ಅಡವಿಯು ಮೃಗಗಳೇ ಇಲ್ಲದಂತಾಗಿರುವುದನ್ನು ನೋಡಿ
ರಾಜನಿಗೆ ಕೋಪ ಬಂದಿತು. ಆತನು ಬಾಣದಿಂದ ಒಬ್ಬ ರಾಕ್ಷಸನನ್ನು ಕೊಂದು
ಬಿಟ್ಟನು. ಇದನ್ನು ನೋಡಿ ಸಂಗಾತಿಯಾಗಿದ್ದ ಇನ್ನೊಬ್ಬ ರಾಕ್ಷಸನು ಬಹಳೇ
ಸಿಟ್ಟಾಗಿ ಈ ರೀತಿ ಅಂದನು- “ರಾಜನೇ, ನೀನು ನಿರಪರಾಧಿಯಾದ ನನ್ನ
ಮಿತ್ರನನ್ನು ಕೊಂದೆ; ಇದರ ಸೇಡನ್ನು ನಾನು ತೀರಿಸುವೆ.”
ಈ ನಂತರ ಕೆಲವು ಕಾಲ ಗತಿಸಿದ ನಂತರ ಆ ರಾಜನು ಅನೇಕ
ವರ್ಷಗಳವರೆಗೆ ನಡೆಯುವ ಒಂದು ಯಜ್ಞವನ್ನು ಪ್ರಾರಂಭಿಸಿದನು. ಆ ಯಜ್ಞವು
ದೇವಯಜ್ಞಸಮವಾಗಿತ್ತು. ಹಿಂದಿನ ವೈರತ್ವವನ್ನು ಜ್ಞಾಪಕದಲ್ಲಿಟ್ಟುಕೊಂಡು ಈ
ರಾಕ್ಷಸನು, ವಸಿಷ್ಠ ಋಷಿಯ ರೂಪವನ್ನು ಧರಿಸಿ, ಯಜ್ಞವು ಮುಗಿದೊಡನೆ
ರಾಜನ ಹತ್ತಿರ ಕೂಡಲೇ ಮಾಂಸಾಹಾರವನ್ನು ಇಚ್ಛಿಸಿದನು. ವಸಿಷ್ಠನ ರೂಪದಲ್ಲಿ
ಈ ಮಾಯಾವೀ ರಾಕ್ಷಸನು ಬಂದ ಸಂಗತಿಯು ರಾಜನ ಗಮನಕ್ಕೆ ಬರಲಿಲ್ಲ;
ಆತನು ತನ್ನ ಅಡಿಗೆಯವರಿಗೆ ಅಡಿಗೆಯನ್ನು ಸಿದ್ಧಗೊಳಿಸಲು ಅಪ್ಪಣೆ ನೀಡಿದನು.
ಅಷ್ಟರಲ್ಲಿ ಆ ರಾಕ್ಷಸನು ವಸಿಷ್ಠನ ರೂಪವನ್ನು ಬಿಟ್ಟು, ಅಡಿಗೆಯವನ ರೂಪವನ್ನು
ಧರಿಸಿ ನರಮಾಂಸವನ್ನು ಸಿದ್ಧಗೊಳಿಸಿದನು. ಈ ಭೋಜನವನ್ನು ನಿಜವಾದ
ವಸಿಷ್ಠನಿಗೆ ಬಡಿಸಿದಾಗ ಅದು ನರಮಾಂಸವೆಂದು ಋಷಿಗೆ ಗೊತ್ತಾಯಿತು.
ಆತನು ಕ್ರೋಧದಿಂದ ಈ ರೀತಿ ಅಂದನು-
ಯಸ್ಮಾತ್ತ್ವಂ ಭೋಜನಂ ರಾಜನ್ಮಮೈತದ್ದಾತುಮಿಚ್ಛಸಿ |
ತಸ್ಮಾದ್ ಭೋಜನಮೇತತ್ತೇ ಭವಿಷ್ಯತಿ ನ ಸಂಶಯಃ ‖೨೮‖