ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಶಪಥ, ಸತ್ಯಕ್ರಿಯೆ

೨೦೧


ಸಮೂಹ ಮತ್ತು ಇನ್ನು ಯಾರು ಬೇಕಾದರೂ ಬಂದು ನೋಡಲು ಎಲ್ಲರಿಗೂ ಮುಕ್ತತೆಯಿತ್ತು.
"ಸ್ತ್ರೀಯಾದವಳಿಗೆ ಪತಿಯೇ ಪರಮದೈವವಿದ್ದುದರಿಂದ ರಾಮನ ಹೇಳಿಕೆಯಂತೆ ಅವಳು ನಡೆದುಕೊಳ್ಳುವಳು” ಎಂಬ ಭರವಸೆಯನ್ನು ವಾಲ್ಮೀಕಿಯು ಕೊಟ್ಟನು.

ಉತ್ತರಕಾಂಡ/೯೬

ನಿಶ್ಚಯಗೊಳಿಸಿದ ತಿಥಿಯ ದಿನ ಸರಿಯಾಗಿ ವಾಲ್ಮೀಕಿಮುನಿಯು ಸೀತೆಯನ್ನು ಕರೆದುಕೊಂಡು ಜನರ ಸಭೆಗೆ ಆಗಮಿಸಿದನು. ವಾಲ್ಮೀಕಿಮುನಿಯು ರಾಮನಿಗೆ ಇಂತೆಂದನು- “ಹೇ ದಾಶರಥೇ, ಲೋಕಾಪವಾದಕ್ಕಾಗಿ ನೀನು ಯಾವಳನ್ನು ನನ್ನ ಆಶ್ರಮದ ಬಳಿ ತ್ಯಜಿಸಿದೆಯೋ, ಅವಳೇ ಈ ಧರ್ಮನಿರತೆ ಪತಿವ್ರತೆ ಸೀತೆ; ಲೋಕಾಪವಾದಕ್ಕೆ ತಲ್ಲಣಗೊಂಡಿರುವ ನಿನಗೆ ಮನವರಿಕೆ ಮಾಡಿಕೊಡಲು ಸಿದ್ಧಳಿದ್ದಾಳೆ. ನೀನು ಅವಳಿಗೆ ಅನುಮತಿಯನ್ನು ಕೊಡು. ಅವಳಿಜವಳಿ ಮಕ್ಕಳಾದ ಈ ಜಾನಕೀಪುತ್ರರು ನಿನ್ನ ಅಜಿಂಕ್ಯ ಪುತ್ರರೇ ಆಗಿದ್ದಾರೆ.

ಈ ಸತ್ಯವನ್ನು ನಾನು ನುಡಿಯುತ್ತಿದ್ದೇನೆ. ನಾನು ಪ್ರಾಚೇತಸನ ಹತ್ತನೆಯ ಪುತ್ರನು, ಅಸತ್ಯ ನುಡಿಯುವದು ನನ್ನ ಸ್ಮರಣೆಯಲ್ಲೂ ಇಲ್ಲ. ಈ ಪುತ್ರರು ನಿನ್ನ ಪುತ್ರರೇ ಇದ್ದಾರೆ. ನನ್ನ ಪಂಚೇಂದ್ರಿಯಗಳ ಮತ್ತು ಆರನೆಯದಾದ ಮನಸ್ಸಿನ ಯೋಗದಿಂದ- 'ಈ ಸೀತೆಯು ಪರಿಶುದ್ಧಳು' ಎಂದು ಮನಗಂಡನಂತರವೇ ನಾನು ಅವಳನ್ನು ಬರಮಾಡಿಕೊಂಡಿದ್ದೆ. ಇವಳ ವರ್ತನೆಯು ಶುದ್ಧವಾಗಿದೆ; ಇವಳು ಪಾಪರಹಿತಳು; ಇವಳಿಗೆ ಪತಿಯೇ ಪರಮದೈವವೆಂದಿದೆ.”

ಬಹುವರ್ಷಸಹಸ್ರಾಣಿ ತಪಶ್ಚರ್ಯಾ ಮಯಾ ಕೃತಾ |
ನೋಪಾಶ್ನೀಯಾಂ ಫಲಂ ತಸ್ಯಾ ದುಷ್ಟೇಯಂ ಯದಿ ಮೈಥಿಲೀ ǁ೨೦ǁ
ಮನಸಾ ಕರ್ಮಣಾ ವಾಚಾ ಭೂತಪೂರ್ವಂ ನ ಕಿಲ್ಬಿಷಮ್ |
ತಸ್ಯಾಹಂ ಪಲಮಶ್ನಾಮಿ ಅಪಾಪಾ ಮೈಥಿಲೀ ಯೆಇ ǁ೨೧ǁ


“ಈ ಮೈಥಿಲಿಯು ದೋಷಿಯಾಗಿದ್ದಲ್ಲಿ ಸಹಸ್ರಾರು ವರ್ಷಗಳ ನನ್ನ ತಪಸ್ಸಿನ ಫಲವು ನನಗೆ ಲಭಿಸದಿರಲಿ! ಮೈಥಿಲಿಯು ಪಾಪರಹಿತವಾಗಿದ್ದಲ್ಲಿ ಮಾತ್ರ, ನನ್ನಿಂದ ಕಾಯಾ ವಾಚಾ ಮನಸಾ ನಡೆಯದಿದ್ದ ಪಾತಕಗಳ ಫಲವು ನನಗೆ ಪ್ರಾಪ್ತವಾಗಲಿ!”