ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರದಾನ

೨೧೫


ದಶರಥನನ್ನು ಉದ್ದೇಶಿಸಿ ನುಡಿಯುತ್ತಾನೆ. ನೀನು ಅರಣ್ಯಕ್ಕೆ ಹೋಗುವುದರಿಂದ,
ನಿನ್ನನ್ನು ಹೊರಗಟ್ಟುವ ಕೈಕೇಯಿಯ ಮತ್ತು ದಶರಥನ ಸ್ವಾರ್ಥವು ನಿರಾಯಾಸವಾಗಿ
ಕೈಗೂಡುತ್ತದೆ ಎಂಬುದನ್ನು ರಾಮನ ನಿದರ್ಶನಕ್ಕೆ ತರುತ್ತಾನೆ ಮತ್ತು ತನಗಿದ್ದ
ಸಂದೇಹವನ್ನು ಈ ರೀತಿ ವ್ಯಕ್ತಮಾಡುತ್ತಾನೆ-
ಯದಿ ನೈವಂ ವ್ಯವಸಿತಂ ಸ್ಯಾದ್ಧಿ ಪ್ರಾಗೇವ ರಾಘವ |
ತಯೋಃ ಪ್ರಾಗೇವ ದತ್ತಶ್ಚ ಸ್ಯಾದ್ವರಃ ಪ್ರಕರತಶ್ಚ ಸಃ ‖೯‖

“ಈ ರೀತಿ ನಿಶ್ಚಿತವಾಗಿರದಿದ್ದರೆ ಈಗ ಬಂದ ವರದ ಪ್ರಸ್ತಾಪವೂ ಅದರ
ವಿನಿಮಯವೂ ಈ ಮೊದಲೇ ನಡೆಯಬೇಕಿತ್ತು; ಆದರೆ ಹಾಗೆ ನಡೆದಿಲ್ಲವಾದ್ದರಿಂದ
ಪೂರ್ವದಲ್ಲಿ ವರವನ್ನು ಕೊಟ್ಟಾಗಿತ್ತು; ಈ ವರೆಗೆ ಬೇಡಿಕೊಂಡಿರಲಿಲ್ಲ- ಎಂಬುದೆಲ್ಲ
ಸುಳ್ಳಿನ ಕಂತೆ” ಎಂದು ಲಕ್ಷ್ಮಣನು ಹೇಳಿದ್ದಾನೆ.
ಯದಯಂ ಕಿಲ್ಬಿಷಾದ್‌ ಭೇದಃ ಕೃತೋsಪ್ಯೇವಂ ನ ಗೃಹ್ಯತೇ |
ಜಾಯತೇ ತತ್ರ ಮೇ ದುಃಖಂ ಧರ್ಮಸಂಗಶ್ಚ ಗರ್ಹಿತಃ ‖೧೩‖

“ನಿನಗೆ ನಡೆಯಲಿರುವ ಅಭಿಷೇಕವನ್ನು ಬುದ್ಧ್ಯಾಪೂರ್ವಕವಾಗಿ, ದುಷ್ಟ
ಹೇತುವಿನಿಂದ ತಡೆಯಲು ಈ ವರದ ನಿಮಿತ್ತವಾಗಿದೆ” ಎಂಬುದು ಸ್ಪಷ್ಟವಿದ್ದರೂ
ರಾಮನಿಗೆ ಯಾವುದೂ ಎನಿಸುತ್ತಿಲ್ಲವೆಂಬುದೇ ಲಕ್ಷ್ಮಣನ ದುಃಖದ
ವಿಷಯವಾಗಿತ್ತು.
ಲಕ್ಷ್ಮಣನು ಒಂದೇ ವರದ ಉಲ್ಲೇಖವನ್ನು ಮಾಡಿದ್ದಾನೆ.

ವಸಿಷ್ಠ

ಅಯೋಧ್ಯಾಕಾಂಡ/೩೭

ವನವಾಸಕ್ಕೆ ಹೋಗುವಾಗ ರಾಮನು ಭೋಗವಸ್ತುಗಳನ್ನು ತ್ಯಾಗ ಮಾಡಿ
ಹೋಗಬೇಕೆಂದು ಆಗ್ರಹ ಹಿಡಿದ ಕೈಕೇಯಿಯು ರಾಮನೊಡನೆ ಹೊರಟ
ಸೀತೆಯೂ ಕೂಡ ವಲ್ಕಲಗಳನ್ನು ಧರಿಸಬೇಕೆಂದು ನುಡಿದಾಗ ವಸಿಷ್ಠ ಮುನಿಗಳು
ಸೀತೆಗೆ ಈ ರೀತಿ ಮಾಡಲು ಪ್ರತಿಬಂಧಿಸಿದರು ಮತ್ತು ಬೇಡಿಕೊಂಡ ವರಗಳ
ಮಿತಿಯನ್ನು ಸ್ಪಷ್ಟವಾಗಿ ಕೈಕೇಯಿಗೆ ವಿವರಿಸಿ ಹೇಳಿದರು-
ಏಕಸ್ಯ ರಾಮಸ್ಯ ವನೇ ನಿವಾಸಸ್ತ್ವಯಾ ವೃತಃ ಕೇಕಯರಾಜಪುತ್ರೀ |
ವಿಭೂಷಿತೇಯಂ ಪ್ರತಿಕರ್ಮನಿತ್ಯಾ ವಸತ್ವರಣ್ಯೇ ಸಹ ರಾಘವೇಣ ‖೩೫‖