ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೨೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವರದಾನ

೨೧೯


ವರಗಳು ಇದರ ಮೇರೆಯಾಗಿದೆ. ರಾಮನಿಗೆ ಕಾಡಿಗೆ ಕಳುಹಿಸುವ ಕಾಲಕೂಟ
ವಿಷವು ಇದರಿಂದ ಹೊರಚಿಮ್ಮಿದೆ. ಈ ಪರಿಯ ಶೋಕಸಾಗರದಲ್ಲಿ ನಾನು
ಮುಳುಗಿದ್ದೇನೆ.”

ಸಿದ್ಧಾರ್ಥ

ಅಯೋಧ್ಯಾಕಾಂಡ/೩೬

ರಘುವಂಶದ ಸಗರರಾಜನು 'ಅಸಮಂಜ'ನೆಂಬ ತನ್ನ ಹಿರಿಯ ಪುತ್ರನಿಗೆ
ರಾಜ್ಯಭೋಗಗಳನ್ನು ನಿರಾಕರಿಸಿ ವನವಾಸಕ್ಕೆ ಕಳುಹಿದ ದಾಖಲೆಯನ್ನು
ಕೈಕೇಯಿಯು ಕೊಟ್ಟು ದಶರಥನನ್ನು ನಿರುತ್ತರಗೊಳಿಸಿದಳು. ಅವಳ ಈ ಮಾತನ್ನು
ಕೇಳಿ ದಶರಥನು ಆಕೆಯನ್ನು ಧಿಕ್ಕರಿಸಿದನು. ಆಗ ಎಲ್ಲ ಸೇವಕವರ್ಗದವರಿಗೂ
ಬೇಸರವಾಯಿತು. ರಾಮನನ್ನು ಅಸಮಂಜನಿಗೆ ಹೋಲಿಸುವದು ತಪ್ಪೆಂದು
ಮಂತ್ರಿಯಾದ ಸಿದ್ಧಾರ್ಥನು ಸ್ಪಷ್ಟಗೊಳಿಸಿದನು; ಲೋಕಾಪವಾದದ ಭಯವಾದರೂ
ಇರಬೇಕೆಂದು ಕೈಕೇಯಿಯ ಗಮನಕ್ಕೆ ತಂದುಕೊಟ್ಟನು.

ಸುಮಂತ್ರ

ಅಯೋಧ್ಯಾಕಾಂಡ/೫೮

ವನವಾಸಕ್ಕೆ ಹೋಗಲಿರುವ ರಾಮನನ್ನು ಬೀಳ್ಕೊಡಲು ಸುಮಂತ್ರನಿಗೆ
ರಥಸಹಿತವಾಗಿ ಕಳಿಸಲಾಗಿತ್ತು. ರಾಮನನ್ನು ಬೀಳ್ಕೊಟ್ಟು ಬಂದ ನಂತರ
ಸುಮಂತ್ರನು ಪಯಣದ ಮಾಹಿತಿಯನ್ನು ದಶರಥರಾಜನಿಗೆ ಕೊಡುತ್ತಿದ್ದಾನೆ.
ಲಕ್ಷ್ಮಣನು ತುಂಬಾ ಸಿಟ್ಟಿನಿಂದ ಮಾತಾಡಿದ್ದನ್ನು ಸುಮಂತ್ರನು ಹೇಳುತ್ತಾನೆ-
'ಯಾವ ಅಪರಾಧಕ್ಕೆಂದು ರಾಮನನ್ನು ಅಡವಿಗೆ ಅಟ್ಟಲಾಗಿದೆ?
ಆತುರಾತುರದಲ್ಲಿ ಕೈಕೇಯಿಗೆ ವಚನವನ್ನು ಕೊಟ್ಟದ್ದು ಒಳ್ಳೆಯದೇ ಇರಲಿ,
ಕೆಟ್ಟದ್ದೇ ಇರಲಿ, ನಮಗೆ ತುಂಬಾ ಕ್ರೋಧವನ್ನುಂಟುಮಾಡಿದೆ.
ಯದಿ ಪ್ರವ್ರಾಜಿತೋ ರಾಮೋ ಲೋಭಕಾರಣಾಕಾರಿತಮ್ |
ವರದಾನನಿಮಿತ್ತಂ ವಾ ಸರ್ವಥಾ ದುಷ್ಕೃತಂ ಕೃತಮ್ ‖೨೮‖

“ರಾಮನನ್ನು ವನವಾಸಕ್ಕೆ ಅಟ್ಟಿದ್ದು ಲೋಭದಿಂದಲೇ ಇರಲಿ ಅಥವಾ
ಕೈಕೇಯಿಗೆ ಕೊಟ್ಟ ವರದಿಂದಲೇ ಇರಲಿ, ಅದೊಂದು ರಾಜನಿಂದ ನಡೆದ
ಘೋರ ಅನರ್ಥವೆಂಬುದು ಖಂಡಿತ.”